ಬೆಂಗಳೂರು: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿರುವ ಕುರಿತು ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಜ.3ರಂದು ರಾಜೀನಾಮೆ ನೀಡಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷ ಸಂಘಟನೆಗೆ ಐವರು ಕಾರ್ಯಾಧ್ಯಕ್ಷರ ನೇಮಕ ಮಾಡುವ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿಲ್ಲ. ರಾಜ್ಯಾಧ್ಯಕ್ಷನಾದರೂ ಸಮನ್ವಯ ಸಮಿತಿಗೆ ಸೇರಿಸಿಲ್ಲ.
ಸರ್ಕಾರದ ಪ್ರಮುಖ ತೀರ್ಮಾನಗಳ ಬಗ್ಗೆ ತಮ್ಮ ಅಭಿಪ್ರಾಯ ಸಹ ಕೇಳುವುದಿಲ್ಲ ಎಂದು ವಿಶ್ವನಾಥ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ನನಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕೋಪ ಮಾಡಿಕೊಳ್ಳುತ್ತಾರೆಂದು ಜೆಡಿಎಸ್ ನಾಯಕರು ಭಾವಿಸಿದಂತಿದೆ. ಹೀಗಾಗಿ, ನನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಾಮ್ ಕಾವಾಸ್ತೆ ಅಧ್ಯಕ್ಷರಾಗಿರುವ ಬದಲು ಹುದ್ದೆ ತ್ಯಜಿಸುವುದು ಸೂಕ್ತ ಎಂಬ ಚಿಂತನೆಯಲ್ಲಿದ್ದೇನೆ. ಜ.3ರಂದು ಪಕ್ಷದ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳ ಸಭೆ ಕರೆದಿದ್ದು ಅಂದು ತಮ್ಮ ತೀರ್ಮಾನ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಳಿ ಹೇಳಲಿದ್ದೇನೆಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಾಧ್ಯಕ್ಷ ಹುದ್ದೆ ತ್ಯಜಿಸಿದರೂ ಪಕ್ಷ ಬಿಡುವುದಿಲ್ಲ. ಶಾಸಕನಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಆಸೆ ಹೊಂದಿದ್ದ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಮೊಬೈಲ್ ಸ್ವಿಚ್ ಆಫ್: ರಾಜೀನಾಮೆ ವಿಚಾರ ಕುರಿತು ವಿಶ್ವನಾಥ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.