Advertisement

ವಿಶ್ವನಾಥ್‌, ರಾಧಾಕೃಷ್ಣ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ

10:07 PM Jan 09, 2023 | Team Udayavani |

ಬೆಂಗಳೂರು: ಕನಕಪುರದ ಡಿ.ಎಂ.ವಿಶ್ವನಾಥ್‌ ಹಾಗೂ ಮಂಡ್ಯದ ರಾಧಾಕೃಷ್ಣ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ.

Advertisement

ಡಿ.ಎಂ.ವಿಶ್ವನಾಥ್‌ ಈ ಹಿಂದೆ ಡಿ.ಕೆ.ಶಿವಕುಮಾರ್‌ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಸೋತಿದ್ದರು. ರಾಧಾಕೃಷ್ಣ ಈ ಬಾರಿ ಜೆಡಿಎಸ್‌ನಿಂದ ಮಂಡ್ಯ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇಬ್ಬರೂ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಕ್ಷದ ಬಾವುಟ ನೀಡಿ ಸ್ವಾಗತ ಕೋರಿದರು.

ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ಪಕ್ಷದ ಇಬ್ಬರು ಪ್ರಮುಖ ನಾಯಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದ, ಜೆಡಿಎಸ್‌ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದ ಡಿ.ಎಂ.ವಿಶ್ವನಾಥ್‌ ಅವರು ಕಾಂಗ್ರೆಸ್‌ ಸೇರುತ್ತಿದ್ದಾರೆ. ಅವರ ಕುಟುಂಬ ಕಾಂಗ್ರೆಸ್‌ ಪಕ್ಷದ ಆಧಾರ ಸ್ತಂಭವಾಗಿತ್ತು. ಅವರು ನನ್ನ ಪರವಾಗಿ ಒಂದೆರಡು ಚುನಾವಣೆಗಳಲ್ಲಿ ಪ್ರಚಾರ ಮಾಡಿ ಬೆಂಬಲ ನೀಡಿದ್ದ ನೆನಪು ಈಗಲೂ ಹಸಿಯಾಗಿದೆ ಎಂದು ಹೇಳಿದರು.

ಮಂಡ್ಯದ ಕೀಲಾರ ಕ್ಷೇತ್ರದಲ್ಲಿ ಎಸ್‌.ಎಂ. ಕೃಷ್ಣ ಅವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ, ಜೆಡಿಎಸ್‌ ಜತೆ ಗುರುತಿಸಿಕೊಂಡಿದ್ದ ರಾಧಾಕೃಷ್ಣ ಅವರು ಬಹಳ ಹಿಂದೆಯೇ ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರುತ್ತೇವೆ ಎಂದು ಹೇಳಿದ್ದರು. ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಹೇಳಿದರು.

ನಾಗೇಶ್‌ ಕಾಂಗ್ರೆಸ್‌ಗೆ?
ಈ ಮಧ್ಯೆ, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ನಾಗೇಶ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಕಾಂಗ್ರೆಸ್‌ ಸೇರಿ ಮಹದೇವಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಆದರೆ, ನಾನು ಮುಳಬಾಗಿಲು ಕ್ಷೇತ್ರದ ಟಿಕೆಟ್‌ ಕೇಳಲು ಬಂದಿರುವೆ ಎಂದು ನಾಗೇಶ್‌ ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next