ಮೈಸೂರು: ಪಕ್ಷದ ವಿಪ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅನರ್ಹಗೊಳಿಸಿರುವ 14 ಅತೃಪ್ತ ಶಾಸಕ ರಲ್ಲಿ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರೂ ಸೇರಿದ್ದು ಸುಪ್ರಿಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಟೀಕಾಸ್ತ್ರ:ಹುಣಸೂರು ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮಭೂಮಿಯಾಗಿಸಿಕೊಂಡಿದ್ದ ಡಿ.ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದು ಪಕ್ಕದ ಕೃಷ್ಣರಾಜ ನಗರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ, ವೀರಪ್ಪ ಮೊಯ್ಲಿ ಮತ್ತು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದ ಎಚ್.ವಿಶ್ವನಾಥ್, 2009ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದರು. ಸುದೀರ್ಘ 40 ವರ್ಷ ಕಾಂಗ್ರೆಸ್‌ನಲ್ಲಿದ್ದು ವಿರೋಧ ಪಕ್ಷಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಾ ಮಾಧ್ಯಮ ಸ್ನೇಹಿ ರಾಜಕಾರಣಿ ಎನಿಸಿದ್ದವರು.
ಅಸಮಾಧಾನ:ಜೆಡಿಎಸ್ ನಿಂದ ಹೊರಬಂದಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಚ್.ವಿಶ್ವನಾಥ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ 1 ವರ್ಷದಲ್ಲೇ ಅವರಿಂದ ದೂರಾದರು. ಅಂತಿಮವಾಗಿ ಕಾಂಗ್ರೆಸ್ ನಿಂದ ಹೊರಬಂದ ಎಚ್.ವಿಶ್ವನಾಥ್, ಕಾಂಗ್ರೆಸ್‌ನಲ್ಲಿದ್ದಷ್ಟು ದಿನ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಹೀನಾಮಾನವಾಗಿ ಟೀಕೆ ಮಾಡುತ್ತಾ ಬಂದಿದ್ದವರು, ಜೆಡಿಎಸ್ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದರು. ಜೆಡಿಎಸ್ ಸೇರಿ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಯಾಗುವ ಮೂಲಕ ರಾಜಕೀಯವಾಗಿ ಪುನರ್ಜನ್ಮ ಪಡೆದ ವಿಶ್ವನಾಥ್, ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿಮಾಣವಾಗಿ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ ತಮ್ಮ ಹಿರಿತನಕ್ಕೆ ಮಂತ್ರಿ ಸ್ಥಾನ ನಿರಾಯಾಸವಾಗಿ ಒಲಿದು ಬರುತ್ತದೆ ಎಂದು ಎಣಿಸಿದ್ದರು. ಆದರೆ, ಸಿಎಂ ಆಗಿದ್ದ ಎಚ್. ಡಿ.ಕುಮಾರಸ್ವಾಮಿ ಅವರು ಸಂಪುಟಕ್ಕೆ ವಿಶ್ವನಾಥ್ ಅವರನ್ನು ಪರಿಗಣಿಸಲೇ ಇಲ್ಲ. ಆದರೆ, ಕುಮಾರಸ್ವಾಮಿ ಅವರಿಂದ ತೆರವಾದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ಡಿ.ದೇವೇಗೌಡ ಅವರು ನೇಮಕ ಮಾಡಿದಾಗ ಒಲ್ಲದ ಮನಸ್ಸಿನಿಂದಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವಹಿಸಿಕೊಂಡರಾದರೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ತಮಗೆ ಸ್ಥಾನ ದೊರೆಯದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಆದರೂ, ದಳಪತಿಗಳು ಇವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇತ್ತ ಪಕ್ಷದ ರಾಜ್ಯಾಧ್ಯಕ್ಷರಾದರೂ ತಮ್ಮ ಮಾತಿಗೆ ಪಕ್ಷದೊಳಗೆ ಕವಡೆ ಕಾಸಿನ ಕಿಮ್ಮತ್ತು ದೊರೆಯದೆ, ಸಣ್ಣ ಪುಟ್ಟ ಕಾರ್ಯಕರ್ತರೂ ದೇವಗೌಡರು, ಕುಮಾರಣ್ಣ ಉಂಟು – ನಾವುಂಟು ಎನ್ನುವ ಮನೋಭಾವ ತೋರಿದ್ದರಿಂದಾಗಿ ನಾಮ್‌ಕೆವಾಸ್ತೆ ಅಧ್ಯಕ್ಷಗಿರಿ ಏಕೆ ಬೇಕು ಎಂಬ ನಿಧಾರಕ್ಕೆ ಬಂದಿದ್ದರು ವಿಶ್ವನಾಥ್. ಅದಕ್ಕೆ ತಕ್ಕಂತೆ ಲೋಕಸಭಾ ಚುನಾವಣೆ ವೇಳೆ ಪಕ್ಷದ ರಾಜ್ಯಾಧ್ಯಕ್ಷರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು.
Advertisement
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸಕಾರದ ವಿರುದ್ಧ ಗೋಕಾಕ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಆರಂಭದಲ್ಲೇ ಬಂಡಾಯದ ಬಾವುಟ ಹಾರಿಸಿದರೆ, ಕೊನೆ ಕ್ಷಣದವರೆಗೂ ಯಾರಿಗೂ ಗುಟ್ಟು ಬಿಟ್ಟುಕೊಡದೆ ಏಕಾಏಕಿ ಎಚ್.ವಿಶ್ವನಾಥ್ ಅತೃಪ್ತ ಶಾಸಕರ ಗುಂಪು ಸೇರಿದ್ದು ಹೇಗೆ ಎಂಬುದೇ ಹುಣಸೂರು ಕ್ಷೇತ್ರದ ರಾಜಕೀಯಾಸಕ್ತ ಮುಖಂಡರಿಗೆ ಅಚ್ಚರಿಯ ಸಂಗತಿಯಾಗಿದೆ.
Related Articles
Advertisement
ಬಿಜೆಪಿ ಸಖ್ಯ: ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್‌ನ ಹೊರೆ ಇಳಿಸಲು ಮಾನಸಿಕವಾಗಿ ತಯಾರಿ ಆರಂಭಿಸಿ, ಮೇಲಿಂದ ಮೇಲೆ ಹಿರಿಯ ರಾಜಕಾರಣಿ, ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್‌ರನ್ನು ಭೇಟಿ ಮಾಡುವ ಮೂಲಕ ಬಿಜೆಪಿ ಸಖ್ಯ ಬೆಳೆಸುತ್ತಿದ್ದಾರೆ ಎಂಬ ಅನುಮಾನ ಮೂಡಿಸಿದರೂ ಶ್ರೀನಿವಾಸಪ್ರಸಾದ್ ತನ್ನ ದೀರ್ಘ ಕಾಲದ ಗೆಳೆಯ, ನಮ್ಮಿಬ್ಬರ ಭೇಟಿಯಲ್ಲಿ ಉಭಯ ಕುಶಲೋಪರಿ ಬಿಟ್ಟರೆ ಬೇರೆ ಯಾವ ವಿಚಾರ ಚರ್ಚೆಯಾಗಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದರು.
ಔತಣ ಕೂಟ:ಕೋಲ್ಕತ್ತಾಗೆ ಹೋಗಿ ಕಾಳಿ ಮಾತೆ ದರ್ಶನ ಪಡೆದು ಬರುವುದಾಗಿ ಹೇಳಿ ಹೋದವರು, ನವದೆಹಲಿಯಲ್ಲಿ ಬಿಜೆಪಿ ಸಂಸದರ ಜೊತೆ ಉಪಾಹಾರ ಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಅದನ್ನು ಸಹಜ ಭೇಟಿ ಎಂದು ಅಲ್ಲೆಗಳೆದವರು ಏಕಾಏಕಿ ಅತೃಪ್ತ ಶಾಸಕರೊಂದಿಗೆ ಮುಂಬೈಗೆ ಹಾರಿ ಮತ್ತಷ್ಟು ಅಚ್ಚರಿಗೆ ಕಾರಣರಾದರು.
ಸಚಿವರಾಗಿದ್ದ ಸಾ.ರಾ. ಮಹೇಶ್ ಮೇಲಿನ ಅಸಮಾಧಾನ, ಕೆ.ಆರ್. ನಗರ ಪುರಸಭೆ ಚುನಾವಣೆಯಲ್ಲಿ ತಾವು ಶಿಫಾರಸು ಮಾಡಿದವರಿಗೆ ಟಿಕೆಟ್ ಕೊಡಲಿಲ್ಲ ಎಂಬುದೆಲ್ಲಾ ನೆಪವಷ್ಟೇ, ಜೆಡಿಎಸ್‌ನಿಂದ ಹೊರಬರಲು ಇಲ್ಲದ ನೆಪ ಹೇಳುತ್ತಿದ್ದಾರೆ ಎಂದು ಹುಣಸೂರಿನ ಜನ ಹೇಳುತ್ತಾರೆ. ಎಚ್.ವಿಶ್ವನಾಥ್ ಅವರ ಈ ನಿರ್ಧಾರದ ವಿರುದ್ಧ ಹುಣಸೂರಿನ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಯನ್ನೂ ವ್ಯಕ್ತಪಡಿಸಿದ್ದಾರೆ.
ಯಾವ ಪಕ್ಷದಿಂದ ಯಾರ್ಯಾರು ಸ್ಪರ್ಧೆ ಸಾಧ್ಯತೆ?:
ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು 14 ಅತೃಪ್ತ ಶಾಸಕರನ್ನೂ ಅನರ್ಹ ಗೊಳಿಸಿರುವುದರಿಂದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲೀಗ ಶಾಸಕರಿಲ್ಲದಂತಾಗಿದೆ. ಮುಂದಿನ 6 ತಿಂಗಳೊಳಗೆ ಉಪ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಜೆಡಿಎಸ್‌ನಿಂದ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯಿಂದ ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್. ಯೋಗಾನಂದ ಕುಮಾರ್ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಂಡು ಸರ್ಕಾರವನ್ನು ಸುಭದ್ರಗೊಳಿಸಿ ಕೊಳ್ಳಬೇಕಾದರೆ ಅನರ್ಹ ಗೊಂಡಿರುವ ಅತೃಪ್ತ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಎದುರಾಗುವ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ತನ್ನದಾಗಿಸಿಕೊಳ್ಳಬೇಕಾದ ಅನಿವಾಯತೆ ಇದೆ. ಹೀಗಾಗಿ ಬಿಜೆಪಿ ವರಿಷ್ಠರು ಯಾವ ತಂತ್ರ ಹಣೆಯಲಿದ್ದಾರೆ. ಹುಣಸೂರು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
● ಗಿರೀಶ್ ಹುಣಸೂರು