Advertisement

Vishwa Hindu Parishad: ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಲಿ: ಭಂಡಾರಕೇರಿ ಶ್ರೀ

12:35 AM Sep 23, 2024 | Team Udayavani |

ಉಡುಪಿ: ಹಿಂದೂಗಳು ಸಿಂಧುವಾಗಬೇಕು; ಬಿಂದುವಾಗಬಾರದು. ಧರ್ಮ ಪರಿಪಾಲನೆ ವಿಷಯದಲ್ಲಿ ಎಲ್ಲರೂ ಒಂದಾಗಬೇಕು. ಅಪ ಪ್ರಚಾರ ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ಬಹಳಷ್ಟು ಅನ್ಯಾಯಗಳು ನಡೆಯುತ್ತಿವೆ. ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ನಡೆದಿರುವ ಅನ್ಯಾಯ ಸರಿಯಲ್ಲ. ಮಠ-ಮಂದಿರದಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು. ಇದಕ್ಕಾಗಿ ದೇಗುಲಗಳಲ್ಲಿ ಮಾರ್ಗದರ್ಶನ ಮಂಡಳಿ ರಚನೆಯಾಗಬೇಕು ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಹೇಳಿದರು.

Advertisement

ವಿಶ್ವ ಹಿಂದೂ ಪರಿಷತ್‌ ಉಡುಪಿ ವತಿಯಿಂದ ಬನ್ನಂಜೆಯ ನಾರಾಯಣ ಗುರು ಆಡಿಟೋರಿಯಂನಲ್ಲಿ ರವಿವಾರ ಜರಗಿದ ಷಷ್ಠಿಪೂರ್ತಿ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು. ರಾಜಕೀಯ ವ್ಯಕ್ತಿಗಳು ಹಿಂದೂ ಮಠ- ಮಂದಿರಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಆಚರಣೆಗಳಿಂದ ಹಿಂಸೆಯಾಗಬಾರದು. ಹಿಂದುತ್ವ ಉಳಿಸುವ ಕೆಲಸದ ಜತೆಗೆ ವಿಶ್ವ ಹಿಂದೂ ಸಿಂಧುವಾಗಬೇಕು ಎಂದರು.

ಧರ್ಮ ಉಳಿಸಲು ಒಂದಾಗಿ: ಕಾಣಿಯೂರು ಶ್ರೀ
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ವಿವಿಧ ಕಾರಣಗಳಿಂದಾಗಿ ಹಿಂದೂ ಧರ್ಮದ ಮೇಲೆ ಆಕ್ರಮಣ, ದಬ್ಟಾಳಿಕೆ ನಡೆಯುತ್ತಿದೆ. ಈ ಆಕ್ರಮಣ ತಿರುಪತಿ ತಿಮ್ಮಪ್ಪನನ್ನೂ ಬಿಡಲಿಲ್ಲ. ಅಲ್ಲಿನ ಪ್ರಸಾದದಲ್ಲೂ ಕೊಬ್ಬು, ಎಣ್ಣೆಯನ್ನು ಹಾಕಿ ಅಪವಿತ್ರಗೊಳಿಸಲಾಗಿದೆ. ಈ ಮೂಲಕ ಹಿಂದೂ ಧರ್ಮವನ್ನು ನಾನಾ ರೀತಿಯಲ್ಲಿ ನಾಶ ಮಾಡುವ ಪ್ರವೃತ್ತಿ ನಡೆಯುತ್ತಿದೆ.

ಹಿಂದೂಗಳೇ ಬಹುಸಂಖ್ಯೆಯಲ್ಲಿರುವ ನಮ್ಮ ದೇಶದಲ್ಲಿ ಗಣೇಶೋತ್ಸವ ಮೆರವಣಿಗೆಯನ್ನೂ ಪೊಲೀಸ್‌ ಭದ್ರತೆಯಲ್ಲೇ ಮಾಡುವ ಶೋಚನೀಯ ಸ್ಥಿತಿ ಎದುರಾಗಿದೆ. ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಒಗ್ಗಟ್ಟಾಗಬೇಕು. ಜಾತಿ-ಜಾತಿಗಳೆಂಬ ಚಿಂತನೆ ಬಿಟ್ಟು ಹಿಂದೂಗಳೆಂಬ ಭಾವನೆ ಇರಬೇಕು ಎಂದರು.

ದೇಹಕ್ಕಿಂತ ದೇಶ ಮುಖ್ಯ: ಶೀರೂರು ಶ್ರೀ
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಾತನಾಡಿ, ನಮ್ಮ ದೇಶ, ಧರ್ಮದ ಮೇಲೆ ಪ್ರೇಮ ಇರಬೇಕು. ಈ ಸಂಘಟನೆಗೆ 60 ವರ್ಷ ತುಂಬಿರುವುದು ಹೆಮ್ಮೆಯ ಸಂಗತಿ. 60ಕ್ಕೆ ನಿವೃತ್ತಿ ಎಂಬಂತಾಗದೆ ಉದಾಸೀನತೆ ಬಿಟ್ಟು ದೇಶದ ರಕ್ಷಣೆಗೆ ಮುಂದಾಗಬೇಕು. ದೇಹಕ್ಕೂ ಮುನ್ನ ದೇಶ ಮುಖ್ಯವಾದುದು. ಸೂರ್ಯ-ಚಂದ್ರರು ಇದ್ದಷ್ಟು ಕಾಲ ಈ ಸಂಘಟನೆ ಉಳಿಯಬೇಕು ಎಂದರು.

Advertisement

ಕರ್ನಾಟಕ ವಿಹಿಂಪ ಮಂದಿರ ಅರ್ಚಕ ಪುರೋಹಿತ್‌ ಪ್ರಮುಖರಾದ ಬಸವರಾಜ್‌, ಉದ್ಯಮಿ ಸಾಧು ಸಾಲ್ಯಾನ್‌, ಕೊಳಲು ವಾದಕ ಪಾಂಡು ಪಾಣಾರ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ, ನಗರ ಅಧ್ಯಕ್ಷ ರಾಕೇಶ್‌ ಮಲ್ಪೆ, ನಗರ ಕಾರ್ಯದರ್ಶಿ ಲೋಕೇಶ್‌ ಶೆಟ್ಟಿಗಾರ್‌ ಉಪಸ್ಥಿತರಿದ್ದರು.
ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next