ದುಬಾೖ: ಗಾಳಿಪಟ ಎಷ್ಟೇ ಎತ್ತರಕ್ಕೆ ಹೋದರೂ ದಾರವನ್ನು ಆಧರಿಸಿರುತ್ತದೆ. ಅದರಂತೆ ನಾವು ಎಷ್ಟು ಔನ್ನತ್ಯ ಸಾಧಿಸಿದರೂ ತುಳು ಅಭಿಮಾನ ಹೊಂದಿರಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಕರೆ ನೀಡಿದರು.
ವಿಶ್ವ ತುಳು ಸಮ್ಮೇಳನ-2018ರ ಸಮಾರೋಪ ಸಮಾರಂಭದಲ್ಲಿ ರವಿವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಮ್ಮೇಳನವು ಕಡಲಂಚಿನ ತುಳುವೆರ್, ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖೀಲ ಭಾರತ ತುಳು ಒಕ್ಕೂಟದ ಸಹಕಾರದಲ್ಲಿ ದುಬಾೖಯ ಅಲ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಸಭಾಂಗಣದಲ್ಲಿ ಎರಡು ದಿನ ನಡೆಯಿತು. ತುಳು ಭಾಷೆಯಲ್ಲಿ ಅಧ್ಯಾತ್ಮದ ತಿರುಳು ಇದೆ. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ದೈವ, ದೇವರ ಸೇವೆ ಇಂದು ವೈಭವೀಕರಣದಿಂದ ಮೂಲ ಸತ್ವ ಕಳೆದುಕೊಳ್ಳುತ್ತಿದೆ. ಈ ಬಗ್ಗೆ ಅರಿತು ಮೂಲ ಆಚಾರದೊಂದಿಗೆ ಭಾಷೆ, ಧರ್ಮ ಉಳಿಸುವ ಕೆಲಸ ನಡೆಯಬೇಕು ಎಂದರು.
ವಿದೇಶದಲ್ಲಿ ತುಳು ಸಮ್ಮೇಳನ ಯಶಸ್ವಿಯಾಗಿದ್ದು ಮಹತ್ತರ ಬದಲಾವಣೆ ಆಗಬೇಕು. ನಾವು ಶುಭ್ರ ವಸ್ತ್ರ ಧರಿಸುತ್ತೇವೆ. ಅದರಂತೆ ಮನಸ್ಸೂ ಶುಭ್ರವಾಗಿದ್ದು, ಮನದಾಳದಲ್ಲಿ ತುಳು ಪ್ರೀತಿ ಬರಬೇಕು. ಸಮ್ಮೇಳನಕ್ಕೆ ಆಶ್ರಯ ನೀಡಿದ ದೊರೆಯನ್ನೂ ದೇವರು ಆಶೀರ್ವದಿಸಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಗೌರವ ಸಲ್ಲಿಸಲಾಯಿತು. ಪದ್ಮಶ್ರೀ ಬಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಪ್ರೊಟೆಸ್ಟೆಂಟ್ ಧರ್ಮಗುರು ವಂ| ಎಬಿಜೆನೆರ್ ಜತ್ತನ್ನ, ಮಾಧ್ಯಮ ಕಮ್ಯುನಿಕೇಷನ್ ನಿರ್ದೇಶಕ ಅಬ್ದುಲ್ ಸಲಾಂ ಪುತ್ತಿಗೆ, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿದ್ದರು. ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಉಪಸ್ಥಿತರಿದ್ದರು. ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು.
ನಮ್ಮ ಮೇಲೆ ಕಲ್ಲು ಎಸೆದ ಕಲ್ಲನ್ನು ಸಂಗ್ರಹಿಸಿ ಮನೆ ಕಟ್ಟಿ ಅನ್ನ ಹಾಕುವ ಸಾಮರ್ಥ್ಯ ತುಳುವರಿಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಅವಕಾಶ ಸಿಗುತ್ತದೆ, ಅದನ್ನು ಬಳಸಿಕೊಂಡು ಯಶಸ್ಸು ಕಾಣಬೇಕಿದೆ.
ಸುನಿಲ್ ಶೆಟ್ಟಿ, ಬಾಲಿವುಡ್ ನಟ