Advertisement
ಕೇರಳದ ಶಬರಿಮಲೆ ಸನ್ನಿಧಾನದಲ್ಲಿ ಸ್ವಾಮಿ ಅಯ್ಯಪ್ಪನ ಮುಂದಿರಿಸಿದ ವಿಷು ಕಣಿ ಕಾಣಲು ವ್ರತಧಾರಿ ಅಯ್ಯಪ್ಪ ಸ್ವಾಮಿಗಳು ದೂರದೂರುಗಳಿಂದ ಆಗಮಿಸುತ್ತಾರೆ. ಗುರುವಾಯೂರು ದೇವಸ್ಥಾನದಲ್ಲಿ ಕಣಿ ಕಾಣುವುದು ಎಂದರೆ ಮಹಾಭಾಗ್ಯವೆಂದು ಸಾವಿರಾರು ಭಕ್ತಾದಿಗಳು ನೆರೆಯುತ್ತಾರೆ. ತೌಳವ ಸಂಸ್ಕೃತಿಯ ತವರೂರಾದ ಕುಂಬಳೆ ಸೀಮೆಯ ಎಲ್ಲಾ ದೇವಾಲಯಗಳಲ್ಲೂ ವಿಷು ಕಣಿಯನ್ನು ಒಂದು ದಿನದ ಉತ್ಸವವಾಗಿ ಆಚರಿಸಲಾಗುತ್ತದೆ. ಅಂದು ವಿಶೇಷ ಪೂಜೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಜರಗಿಸಲಾಗುತ್ತದೆ. ತುಳುನಾಡಿನ ಹೆಚ್ಚಿನ ಶಿವದೇವಾಲಯಗಳಲ್ಲಿ ವಿಷು ಜಾತ್ರೆಯು ಜರಗುತ್ತದೆ. ಕುಂಬಳೆ ಸೀಮೆಯ ಪ್ರಮುಖ ದೇವಾಲಯವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ “ವಿಷು ಕಣಿ’ ಪ್ರಸಿದ್ಧವಾಗಿದೆ.
Related Articles
Advertisement
ಮೇಷ ಮಾಸದ ಪ್ರಥಮ ದಿನವೇವಿಷುಕಣಿ. ಇದರ ಮೊದಲಿನ ದಿನವೇ ಮನೆಯನ್ನು ಶೃಂಗಾರ ಮಾಡುತ್ತಾರೆ ಮತ್ತು ರಾತ್ರಿಯಲ್ಲಿಯೇ ದೇವರಕೋಣೆಗೆ ಕಣಿ ಕಾಣಲು ಇಡಬೇಕಾದ ವಸ್ತುಗಳನ್ನು ಅಣಿಗೊಳಿಸುತ್ತಾರೆ. ಕಣಿ ಕಾಣುವ ವಸ್ತುಗಳಾಗಿ ಫಲವಸ್ತುಗಳು, ನವಧಾನ್ಯಗಳು, ನೂತನ ವಸ್ತ್ರಗಳು, ಧನ-ಕನಕಗಳು ಇತ್ಯಾದಿಗಳನ್ನು ಓರಣಗೊಳಿಸಿಟ್ಟು ಹೊಸ ಮಡಕೆಯಲ್ಲಿ ಅಥವಾ “ಉರುಳಿ ಪಾತ್ರೆ’ಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ದರ್ಪಣ (ಕನ್ನಡಿ) ವನ್ನಿರಿಸುತ್ತಾರೆ. ಕಣಿ ಕಾಣುವ ದಿನ ಪ್ರಾತ:ಕಾಲ ನಾಲ್ಕು ಗಂಟೆಗೆದ್ದು ಸ್ನಾನ ಮಾಡಿ ನೂತನ ವಸ್ತ್ರ ಧರಿಸಿ, ಗುರುಹಿರಿಯರಿಗೆ ವಂದಿಸಿ ಶುಭಾಶೀರ್ವಾದ ಪಡೆದು ಅನಂತರ ಕಣಿ ಕಾಣುವುದು ಸಂಪ್ರದಾಯ. ಕಣಿ ಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕೆಂತಲೂ ಹೇಳಿಕೆ. “ಆಯುಃ ಶ್ರೀಕಾರಿತ್ವಮ್| ಪಾಪನಾಶಿತ್ವಂಚ||’ ಎಂದರೆಕನ್ನಡಿಯಲ್ಲಿ ಮುಖ ನೋಡುವುದರಿಂದ ಆಯುಷ್ಯವು ಹೆಚ್ಚುತ್ತದೆ. ಸಂಪತ್ತು ಉಂಟಾಗುತ್ತದೆ. ಪಾಪವನ್ನು ಹೋಗಲಾಡಿಸುತ್ತದೆ. ಈ ಕಾರಣದಿಂದಲೇ ಕಣಿ ಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕೆಂದು ವಿಧಿಸಿರಬಹುದು. ಮನೆಯಲ್ಲಿ ಮಾತ್ರವಲ್ಲ ಹತ್ತಿರದ ದೇವಾಲಯಕ್ಕೆ ತೆರಳಿ ಅಲ್ಲಿಯೂ ದೇವರಿಗಿಟ್ಟ ಕಣಿಯನ್ನು ಕಾಣುವುದು ಸಂಪ್ರದಾಯವಾಗಿದೆ. ನಮ್ಮನ್ನು ಇಡೀ ವರ್ಷ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎದುರಾಗುವ ತೊಡಕುಗಳನ್ನೆಲ್ಲಾ ನಿವಾರಣೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುವುದೇ ವಿಷು ಕಣಿ ಕಾಣುವ ಉದ್ದೇಶವಾಗಿದೆ.
ದೇವಾಲಯಗಳಲ್ಲಾದರೆ ಮೇಷ ಸಂಕ್ರಮಣದ ರಾತ್ರಿ ಪೂಜೆಯಾದ ಬಳಿಕ ಶುದ್ಧ ಮಾಡಿ, ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿಯನ್ನು ತುಂಬಿ ಅದರ ಮೇಲೆ ಫಲವಸ್ತುಗಳನ್ನಿಟ್ಟು, ಹೂಹಾರ, ಬಂಗಾರದ ಸರಗಳನ್ನಿಟ್ಟು ಪ್ರಾರ್ಥನೆ ಮಾಡಿ ದೇವರಿಗೆ ವಂದಿಸಿ ಬಾಗಿಲು ಹಾಕಿ ಹೋಗುವುದೂ, ಮರುದಿನ ಉಷಃಕಾಲಕ್ಕೆ ಬಾಗಿಲು ತೆರೆದು ದೇವರಿಗೆ ದೀಪ ಹಚ್ಚಿ ಆ ಕಣಿಯನ್ನು ಎಲ್ಲರಿಗೂ ಕಾಣುವಂತೆ ಮಾಡಬೇಕೆಂಬುದು ಶಾಸ್ತ್ರವಾಗಿದೆ. ದೇವರಿಗೆ ಯಾವತ್ತೂ ಅರ್ಪಿಸದ ಕೊನ್ನೆ ಪುಷ್ಪ (ಕಕ್ಕೆ ಹೂ)ವನ್ನು ದೇವರಿಗೆ ಕಣಿ ಕಾಣಿಕೆಯಾಗಿ ಒಪ್ಪಿಸುತ್ತಾರೆ. ಶ್ರೀಕೃಷ್ಣನು ಕೊನ್ನೆ ಹೂಗಳಿಂದ ಪಾದಸರವನ್ನು ಮಾಡಿ ಹಾಡಿಕೊಂಡಿದ್ದನೆಂದು ಇದಕ್ಕೆ ಪ್ರಾಧಾನ್ಯತೆಯನ್ನು ಕಲ್ಪಿಸಲಾಗಿದೆ. ದೇವರಿಗೆ ಪ್ರಧಾನ ನೈವೇದ್ಯವಾಗಿ ಅಕ್ಕಿಹಿಟ್ಟು -ಬೆಲ್ಲ-ಬಾಳೆಹಣ್ಣುಗಳ ಪಾಕವನ್ನು ತುಪ್ಪ ಅಥವಾ ತೆಂಗಿನ ಎಣ್ಣೆಯಲ್ಲಿ ಹುರಿದು ತಯಾರಿಸುವ “ಉಣ್ಣಿ ಅಪ್ಪ’ (ಕಾರಿಯಪ್ಪ)ವನ್ನು ಸಮರ್ಪಿಸುತ್ತಾರೆ. ಇದನ್ನು ಬಂದವರಿಗೆಲ್ಲಾ ಹಂಚುತ್ತಾರೆ. ಅಳಿಯಕಟ್ಟು ಪ್ರಧಾನವಾಗಿರುವ ಕುಟುಂಬದವರು ತಮ್ಮ ಮೂಲ ತರವಾಡು ದೈವಸ್ಥಾನಗಳಿಗೆ ತೆರಳಿ ದೈವ – ದೇವರಗಳ ಕಣಿಯನ್ನು ಕಾಣುತ್ತಾರೆ. ಕೃಷಿಕ ಮನೆಯ ಯಜಮಾನನು ಕೃಷಿ ಮಾಡಲು ಪ್ರಾರಂಭಿಸುವ ಮಾಸವೆಂಬ ಭಾವನೆಯಿಂದ ಗದ್ದೆಯನ್ನು ಉತ್ತು “ನುರಿ ಇಡಲ್’ ಅಥವಾ “ಬಲಬಂಧು ಉಳುವುದು’ ಎಂಬ ಕ್ರಮವನ್ನು ನೆರವೇರಿಸುತ್ತಾರೆ.
ವಿಷುಕಣಿಯು ವಸಂತ ಋತುವಿನಲ್ಲಿ ಬರುವುದರಿಂದ ಈ ಅಧಿದೇವತೆ ಮಾಧವ ಎಂದರೆ ಶ್ರೀಕೃಷ್ಣ ಹಾಗೆ ಎಲ್ಲಾ ದೇವರುಗಳು ಮೂರ್ತಿಗಳಲ್ಲಿ ವಸಂತ ಮಾಧವನ ಸಾನ್ನಿಧ್ಯವನ್ನು ಕಲ್ಪಿಸಿ ಭಕ್ತರು ವಿಷು ಕಣಿ ಕಾಣುತ್ತಾರೆ. ವಿಷುಕಣಿಯು ಪ್ರತಿಯೊಂದು ಗ್ರಾಮ ಸೀಮೆ ದೇವಸ್ಥಾನಗಳಲ್ಲೂ ನಡೆಯುವ ಪದ್ಧತಿಯಾಗಿದೆ. ತುಳುನಾಡಿನ ವೈಷ್ಣವ ದೇವಾಲಯಗಳಲ್ಲಿ ವಿಷು ಜಾತ್ರೆಯನ್ನು ಜರಗಿಸುತ್ತಾರೆ.
– ಕೇಳು ಮಾಸ್ತರ್ ಅಗಲ್ಪಾಡಿ