Advertisement

ವಿಷ್ಣು ಬರ್ತ್‌ಡೇಗೆ ಸಸಿ ನೆಡುವ ಕಾರ್ಯಕ್ರಮ

06:21 PM Sep 17, 2017 | |

ಇಂದು ಡಾ. ವಿಷ್ಣುವರ್ಧನ್‌ ಅವರ 67 ನೇ ಹುಟ್ಟುಹಬ್ಬ. ರಾಜ್ಯಾದ್ಯಂತ ಸಡಗರದಿಂದಲೇ ತಮ್ಮ ಪ್ರೀತಿಯ ನಾಯಕನ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳು ಸಹ ನಡೆಯಲಿವೆ. ವಿಭಾ ಚಾರಿಟಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಸಸಿ ನೆಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಆಡುಗೋಡಿಯಲ್ಲಿರುವ ನ್ಯಾಷನಲ್‌ ಡೈರಿ ರೀಸರ್ಚ್‌ ಇನ್ಸಿಟ್ಯೂಟ್‌ನಲ್ಲಿ ಬೆಳಗ್ಗೆ 10 ಕ್ಕೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

Advertisement

402 ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ಈ ಕಾರ್ಯಕ್ರಮಕ್ಕೆ ರೋಟರಿ ಕೂಡ ಸಾಥ್‌ ನೀಡುತ್ತಿದೆ. ಇದಷ್ಟೇ ಅಲ್ಲ, ಅನಿರುದ್ಧ ಅಭಿನಯದ “ರಾಜಾಸಿಂಹ’ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಲಿದೆ. ಡಾ.ವಿಷ್ಣುವರ್ಧನ್‌ ಅವರ ಮನೆಯಲ್ಲಿ ಮಧ್ಯಾಹ್ನ 12 ಕ್ಕೆ ಶುರುವಾಗಲಿರುವ ಈ ಕಾರ್ಯಕ್ರಮದಲ್ಲಿ ಡಾ.ಭಾರತಿ ವಿಷ್ಣುವರ್ಧನ್‌, ನಿರ್ದೇಶಕ ರವಿರಾಮ, ನಿರ್ಮಾಪಕ ಸಿ.ಡಿ.ಬಸಪ್ಪ ಸೇರಿದಂತೆ ಚಿತ್ರತಂಡ ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಡಾ.ಭಾರತಿ ವಿಷ್ಣುವರ್ಧನ್‌, ನಿಖೀತಾ ತುಕ್ರಾಲ್‌, ಸಂಜನಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ, ಅಭಿಮಾನಿಗಳು ವಿಷ್ಣು ಸಮಾಧಿ ಬಳಿ ಹೋಗಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್‌ ಅವರ ಹಲವು ಸಂಘಟನೆಗಳ ಪದಾಧಿಕಾರಿಗಳು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ವೇಳೆ ವಿಷ್ಣು ಅಭಿಮಾನಿಗಳು ಅನ್ನಸಂತರ್ಪಣೆಯನ್ನೂ ಏರ್ಪಡಿಸಿದ್ದಾರೆ.

ಉಪ್ಪಿ ಬರ್ತ್‌ಡೇಗೆ ಅನ್ನದಾನ
ಈ ಹಿಂದೆ ನಟ ಸುದೀಪ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಅಭಿಮಾನಿಗಳಿಗೂ ಆ ನಿಟ್ಟಿನಲ್ಲಿ ಕರೆ ಕೊಟ್ಟಿದ್ದರು. ತಮ್ಮ ಹುಟ್ಟುಹಬ್ಬದ ದಿನದಂದು, ಕೇಕ್‌ ಕತ್ತರಿಸುವುದು, ಆ ಹೆಸರಲ್ಲಿ ದುಂದುವೆಚ್ಚ ಮಾಡುವುದಕ್ಕಿಂತ ಅಗತ್ಯ ಇದ್ದವರಿಗೆ ಊಟ, ಇತ್ಯಾದಿ ವ್ಯವಸ್ಥೆ ಮಾಡುವಂತೆ ಹೇಳಿಕೆ ಕೊಟ್ಟಿದ್ದರು. ಅದರಂತೆಯೇ ಅವರ ಅಭಿಮಾನಿಗಳು ಸಹ, ಅದೆಷ್ಟೋ ಹಸಿದವರಿಗೆ ಅನ್ನದಾನ ಮಾಡಿದ್ದರು. ಸುದೀಪ್‌ ಮಾತಿನಂತೆಯೇ ನಡೆದುಕೊಂಡಿದ್ದರು.

ಸುದೀಪ್‌ ಅವರಂತೆಯೇ ಉಪೇಂದ್ರ ಕೂಡ ತಮ್ಮ ಹುಟ್ಟುಹಬ್ಬದ ಹೆಸರಲ್ಲಿ ಅಭಿಮಾನಿಗಳು ದುಂದುವೆಚ್ಚ ಮಾಡದೆ, ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿ ಎಂದು ಮನವಿ ಮಾಡಿದ್ದರು. ಅದರಂತೆ ಉಪೇಂದ್ರ ಅವರ ಅಭಿಮಾನಿಗಳು, ಅಭಿಮಾನಿ ಸಂಘದ ಪದಾದಿಕಾರಿಗಳು ಉಪೇಂದ್ರ ಅವರ ಮಾತನ್ನೇ ಪಾಲಿಸುತ್ತಿದ್ದಾರೆ. ಸೆ.18 (ಇಂದು) ಆಟೋ ಶಂಕರ್‌ ಡಾ.ಉಪೇಂದ್ರ ಅಭಿಮಾನಿಗಳ ಸಂಘದಿಂದ ಹಲವು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Advertisement

ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಮಲೆಮಾದೇಶ್ವರ ದೇವಸ್ಥಾನದಲ್ಲಿ ಉಪೇಂದ್ರ ಅವರ ಹೆಸರಲ್ಲಿ ಅರ್ಚನೆ ಮಾಡಿಸುವ ಮೂಲಕ ಆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಿದ್ದಾರೆ. ಆ ಬಳಿಕ ಬನಶಂಕರಿಯಲ್ಲಿರುವ “ನವಚೇತನ ಟ್ರಸ್ಟ್‌’ನ ಬುದ್ಧಿಮಾಂಧ್ಯ ಮಕ್ಕಳೊಂದಿಗೆ ಉಪೇಂದ್ರ ಅವರ ಹುಟ್ಟುಹಬ್ಬ ಆಚರಿಸಿ, ಅವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು, ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಚಾಮರಾಜಪೇಟೆ ಸುತ್ತಮುತ್ತಲು ಬೀದಿ ಬದಿ ಮಲಗುವ ಜನರಿಗೆ ಚಾಪೆ, ಕಂಬಳಿ ವಿತರಣೆ ಮಾಡುವುದರ ಜತೆಗೆ ಅವರಿಗೆ ಊಟವನ್ನೂ ಕಲ್ಪಿಸಲು ಸಂಘದ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. 

ಆಟೋ ಶಂಕರ್‌ ಡಾ.ಉಪೇಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾಗರ್‌ ಹೇಳುವಂತೆ, ಪ್ರತಿ ವರ್ಷವೂ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಹಾರ, ಕೇಕ್‌ಗೆಂದು ಖರ್ಚು ಮಾಡುತ್ತಿದ್ದೆವು. ಉಪೇಂದ್ರ ಅವರು ಆ ಹಣವನ್ನು ಒಳ್ಳೆಯದ್ದಕ್ಕೆ ಬಳಸಿ ಎಂದು ಹೇಳಿದ ಮೇಲೆ, ಇನ್ನು ಮುಂದೆ ಉಪೇಂದ್ರ ಅವರ ಪ್ರತಿ ಹುಟ್ಟುಹಬ್ಬಕ್ಕೂ ಸಂಘದಿಂದ ಈ ರೀತಿಯ ಕೆಲಸಗಳನ್ನು ಮಾಡಲು ತೀರ್ಮಾನಿಸಿದ್ದೇವೆ’ ಎಂದು ವಿವರ ಕೊಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next