ಬೆಂಗಳೂರು: ರಾಜ್ಯದಲ್ಲಿ ಪ್ರಾಯೋಗಿಕ ವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಚುವಲ್ ಕ್ಲಿನಿಕ್ ಆರಂಭಿಸಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಜ್ಞಾನಜ್ಯೋತಿ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ವರ್ಚುವಲ್ ಕ್ಲಿನಿಕ್ ಆರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಇದರ ನಿರ್ವಹಣಾ ಜವಾಬ್ದಾರಿ ವಹಿಸಲಿದೆ. ವಿವಿಧ ವಿಭಾಗದ ತಜ್ಞ ವೈದ್ಯರ ಸಹಕಾರದೊಂದಿಗೆ ಇದನ್ನು ಸಾಕಾರ ಮಾಡಲಿದ್ದೇವೆ ಎಂದರು.
ವರ್ಚುವಲ್ ಕ್ಲಿನಿಕ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದ್ದು, ಇದಕ್ಕಾಗಿ ರಾಯಚೂರು, ಯಾದಗಿರಿ, ಮೊಳಕಾಲ್ಮೂರು, ಶಿಕಾರಿಪುರ ಹಾಗೂ ಮಾಗಡಿಯಲ್ಲಿ ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ದು ಕೊಂಡಿದ್ದೇವೆ. ವರ್ಚುವಲ್ ಕ್ಲಿನಿಕ್‌ಗಳನ್ನು ಹಂತಹಂತವಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಬೇಕಿರುವ ತಂತ್ರಜ್ಞಾನ ಹಾಗೂ ಪರಿಕರಗಳ ಲಭ್ಯತೆಯ ಬಗ್ಗೆಯೂ ಸಿದ್ಧತೆ ನಡೆಯುತ್ತಿದೆ ಎಂದರು.
ಅಕ್ರಮ ತಡೆಗೆ ಸಮಿತಿ: ವೈದ್ಯಕೀಯ ಶಿಕ್ಷಣದ ಸೀಟು ಬ್ಲಾಕಿಂಗ್ ದಂಧೆ ಸಹಿತವಾಗಿ ಸೀಟು ಹಂಚಿಕೆ ವಿಚಾರವಾಗಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ತಡೆಯುವ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಸೀಟ್ ಬ್ಲಾಕಿಂಗ್ ದಂಧೆ ಕುರಿತು ಅಧ್ಯಯನ ನಡೆಸಲಿದೆ ಮತ್ತು ಅದನ್ನು ಯಾವ ರೀತಿ ತಡೆಗಟ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದರು.
ರಾಷ್ಟ್ರೀಯ ಯುವದಿನ: ಜ.12ರಂದು ರಾಷ್ಟ್ರೀಯ ಯುವದಿನವನ್ನಾಗಿ ಆಚರಣೆ ಮಾಡಲಿದ್ದು, ಆ ದಿನ ರಾಜ್ಯದ ಯುವ ಶಕ್ತಿಯ ಪ್ರೋತ್ಸಾಹಕ್ಕಾಗಿ ಹೊಸ ಯೋಜನೆಯೊಂದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಲಿದ್ದಾರೆ. ಈ ಯೋಜನೆ ರಾಜ್ಯದ ಯುವಶಕ್ತಿಗೆ ಹೊಸ ಚೈತನ್ಯ ತುಂಬಲಿದೆ ಎಂದು ಇದೇ ವೇಳೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ಕಾಲೇಜುಗಳು ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಯುನಿಫೈಡ್ ಯುವರ್ಸಿಟಿ ಮತ್ತು ಕಾಲೇಜ್ ಮ್ಯಾನೇಜ್ಮೆಂಟ್ ವ್ಯವಸ್ಥೆ ತರಲಿದ್ದೇವೆ. ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ “ವಿಷನ್ ಗ್ರೂಪ್’ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.