ಮುಂಬೈ: ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ತನ್ನ ಟ್ವೀಟ್ ಗಳಿಂದಲೇ ಜನಪ್ರಿಯರಾಗಿದ್ದಾರೆ. ತನ್ನ ತಮಾಷೆಯ ಟ್ವೀಟ್ ಗಳಿಂದ ಮನೆ ಮಾತಾಗಿರುವ ಸೆಹವಾಗ್ ಈಗ ಐಪಿಎಲ್ ಸಾಧಕರಿಗೆ ವಿಶೇಷ ಬಹುಮಾನ ಪ್ರಕಟಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕಳೆದ ರವಿವಾರ 12 ನೇ ಆವೃತ್ತಿಯ ಐಪಿಎಲ್ ಕೂಟದ ಅಂತಿಮ ಪಂದ್ಯ ನಡೆಯಿತು. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಒಂದು ರನ್ ಗಳಿಂದ ಗೆದ್ದು ಬೀಗಿತ್ತು. ಈ ವೇಳೆ ಸೆಹವಾಗ್ ತನ್ನ ಟ್ವೀಟರ್ ಖಾತೆಯಲ್ಲಿ ವಿಶೇಷ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಈ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರಿಗೆ ಸೆಹವಾಗ್ ತಮ್ಮ ‘ವೀರೂ ಘರೇಲೂ ಅವಾರ್ಡ್’ಗೆ ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಆಟಗಾರರು ಯಾರು? ಯಾವ ಪ್ರಶಸ್ತಿ? ಇಲ್ಲಿದೆ ಫುಲ್ ಡಿಟೈಲ್ಸ್ .
ವೀರೂ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊದಲ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್ ನ ಹೊಡೆಬಡಿ ಆಟಗಾರ ರಿಷಭ್ ಪಂತ್. ಚಟ್ನಿ ಅರೆಯುವ ಕಲ್ಲು ಪಂತ್ ಪಡೆದಿರುವ ಪ್ರಶಸ್ತಿ ! ಈ ವಿಚಿತ್ರ ಪ್ರಶಸ್ತಿ ಯಾಕೆ ಅಂತೀರಾ, ಪಂತ್ ವಿಶ್ವದ ಅತ್ಯುತ್ತಮ ಬೌಲರ್ ಗಳನ್ನು ಚಟ್ನಿ ರುಬ್ಬುವಂತೆ ರುಬ್ಬುತ್ತಾರೆ ಅದಕ್ಕೆ !
ವಿರೇಂದ್ರ ಸೆಹವಾಗ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೋರ್ವ ಕೊಲ್ಕತ್ತಾ ನೈಟ್ ರೈಡರ್ಸ್ನ ಆಂದ್ರೆ ರಸ್ಸೆಲ್. ಅವರಿಗೆ ವೀರೂ ನೀಡಿದ ಪ್ರಶಸ್ತಿ ದಾಮಾಸ್ ( ಮಣ್ಣು ಹದ ಮಾಡುವ ಮರದ ಉಪಕರಣ) ಬೌಲರ್ ಗಳನ್ನು ರಸ್ಸೆಲ್ ದಂಡಿಸುವ ಪರಿಗೆ ವೀರೂ ಈ ಪ್ರಶಸ್ತಿ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಧೊನಿಗೆ ‘ಟಾರ್ಚ್’ ಪ್ರಶಸ್ತಿ ನೀಡಿದ ವೀರೂ, ಧೋನಿ ಚೆನ್ನೈ ತಂಡಕ್ಕೆ ಬೆಳಕು ನೀಡುತ್ತಾರೆ ಅದಕ್ಕೆ ಈ ಪ್ರಶಸ್ತಿ ಎಂದಿದ್ದಾರೆ. ಚೆನ್ನೈ ನ ಇನ್ನೋರ್ವ ಆಟಗಾರ ಈ ಋತುವಿನ ಯಶಸ್ವಿ ಬೌಲರ್ ಇಮ್ರಾನ್ ತಾಹೀರ್ ಗೆ ಸೆಹವಾಗ್ ಹಳೇ ಜೀನ್ಸ್ ಅನ್ನು ಪ್ರಶಸ್ತಿಯಾಗಿ ನೀಡಿದ್ದಾರೆ. ಯಾಕೆಂದರೆ ತಾಹೀರ್ ಗೆ ಈಗ 40 ವರ್ಷ. ವಯಸ್ಸಾದರೂ ಸಾಮರ್ಥ್ಯ ಕಡಿಮೆಯಾಗಿಲ್ಲ ಎನ್ನುವುದು ತಾಹೀರ್ ಗೆ ಜೀನ್ಸ್ ಪ್ರಶಸ್ತಿ ಸಿಕ್ಕಿರುವ ಹಿಂದಿರುವ ರಹಸ್ಯ.
ಮುಂಬೈನ ಬೌಲರ್ ಜಸ್ಪ್ರೀತ್ ಬುಮ್ರಾ ಗೆ ಮಂಜುಗಡ್ಡೆಯನ್ನು ನೀಡಿರುವ ವಿರೇಂದ್ರ ಸೆಹವಾಗ್, ಬುಮ್ರಾ ಯಾವ ಒತ್ತಡದಲ್ಲೂ ಕೂಲ್ ಆಗಿ ಬೌಲಿಂಗ್ ನಡೆಸುತ್ತಾರೆ ಎಂದಿದ್ದಾರೆ. ಇನ್ನು ಡೆಲ್ಲಿ ಬೌಲರ್ ಕಗೀಸೊ ರಬಾಡಾಗೆ ‘ನೀರೆತ್ತುವ ಪಂಪ್’ ಅನ್ನು ಪ್ರಶಸ್ತಿಯಾಗಿ ನೀಡಿದ್ದಾರೆ. ರಬಾಡಾ ಬೌಲಿಂಗ್ ವೇಗ, ಮತ್ತು ನಿಖರತೆಗಾಗಿ ವೀರೂ ಈ ಪ್ರಶಸ್ತಿ ನೀಡಿದ್ದಾರೆ.
ಈ ವರ್ಷದ ಆರೇಂಜ್ ಕ್ಯಾಪ್ ವಿನ್ನರ್ ಡೇವಿಡ್ ವಾರ್ನರ್ ಕೂಡಾ ವೀರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಾರ್ನರ್ ಗೆ ಜ್ಯೂಸ್ ಮಷಿನ್ ನೀಡಿದ್ದಾರೆ. ಯಾಕೆಂದರೆ ವಾರ್ನರ್ ತನ್ನ ಆಟದಿಂದ ಬೌಲರ್ ಗಳನ್ನು ಜ್ಯೂಸ್ ಮಾಡುತ್ತಾರೆ ಎಂದು ಇದರರ್ಥ. ಇನ್ನು ಮುಂಬೈ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಮಸಾಲಾ ಪಾತ್ರೆ ಪ್ರಶಸ್ತಿ ನೀಡಿರುವ ವೀರೂ, ಪಾಂಡ್ಯಾರಲ್ಲಿ ಎಲ್ಲಾ ತರಹದ ಆಟವಿದೆ ಎನ್ನುವುದು ಸೆಹವಾಗ್ ಅಭಿಪ್ರಾಯ.
ಒಟ್ಟಾರೆ ವಿರೇಂದ್ರ ಸೆಹವಾಗ್ ಮಾಡಿರುವ ಈ ಟ್ವೀಟ್ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ.