Advertisement

ವಿರಾಟಪುರ ವಿರಾಗಿ ಚಿತ್ರ ವಿಮರ್ಶೆ: ವಿರಾಗಿಯ ಬದುಕಿನ ಮೇಲೊಂದು ಬೆಳಕು

12:13 PM Jan 14, 2023 | Team Udayavani |

12 ನೇ ಶತಮಾನದಲ್ಲಿ ಬಸವಣ್ಣನವರಿಂದ ಆರಂಭವಾದ ಭಕ್ತಿ ಪಂಥವು ಸಮಾಜದ ಏಳಿಗೆಗಾಗಿ ನಿರ್ಮಿಸಲ್ಪಟ್ಟಿದೆ. ಸಮಾಜದಲ್ಲಿನ ಜಾತಿಪದ್ಧತಿ ಎಂಬ ಅನಿಷ್ಠವನ್ನು ಹೋಗಲಾಡಿಸಿ, ಜಾತಿ, ಲಿಂಗ, ವೃತ್ತಿ, ಎಲ್ಲವನ್ನೂ ಮೀರಿ ಲಿಂಗದೀಕ್ಷೆ ನೀಡುವ ಮೂಲಕ, ಕಾಯಕದಿಂದ ಶಿವನಲ್ಲಿ ಲೀನವಾಗುವ ಪರಿಯನ್ನು ಲೋಕಕ್ಕೆ ಸಾರಿದವರು ಬಸವಣ್ಣ. ಬಸವಣ್ಣನವರ ನಂತರ 19-20 ಶತಮಾನದಲ್ಲಿ ವೀರಶೈವ ಧರ್ಮದ ಉದ್ಧಾರ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಯೋಗಿಗಳು ಹಾನಗಲ್‌ ಕ್ಷೇತ್ರದ ವಿರಾಟಪುರದ ಶ್ರೀ ಕುಮಾರ ಶಿವಯೋಗಿಗಳು. ಶ್ರೀ ಕುಮಾರ ಶಿವಯೋಗಿಗಳ ಜೀವನಗಾಥೆ ಲೋಕಕ್ಕೆ ಮಾದರಿಯಾಗಿದ್ದು, ಈ ವಾರ ತೆರೆ ಕಂಡ “ವಿರಾಟಪುರ ವಿರಾಗಿ’ ಚಿತ್ರ ಅದಕ್ಕೆ ಸಾಕ್ಷಿಯಾಗಿದೆ.

Advertisement

ನಿರ್ದೇಶಕ ಬಿ.ಎಸ್‌ ಲಿಂಗದೇವರು ನಿರ್ದೇಶನದ ಈ ಚಿತ್ರ ಶ್ರೀಗಳ ಜೀವನಾಧಾರಿತ ಚಿತ್ರವಾಗಿದೆ. ಶಿವಯೋಗಿಗಳ ಕುರಿತು ಸಂಪೂರ್ಣ ಅಧ್ಯಯನ ನಡೆಸಿ , ಅವರ ಜೀವನ ಘಟ್ಟದ ಅತೀ ಮುಖ್ಯ ಅಂಶಗಳನ್ನು ಮೂರು ಗಂಟೆಗಳ ಮಿತಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಚಿತ್ರತಂಡದ್ದಾಗಿದೆ.

ಶ್ರೀ ಕುಮಾರ ಶಿವಯೋಗಿಗಳ ಬಾಲ್ಯ, ಓದು, ಆತ್ಮಲಿಂಗದ ಕಡೆಗಿನ ಒಲವು, ಸನ್ಯಾಸ, ಸಮಾಜ ಪರ ಕಾರ್ಯಗಳು ಎಲ್ಲವನ್ನೂ ದೃಶ್ಯ ಕಾವ್ಯದ ಮೂಲಕ ತೋರಿಸಲಾಗಿದೆ. ಶ್ರೀ ಕುಮಾರ ಶಿವಯೋಗಿಗಳ , ಬದುಕಿನ ದಾರಿಯೇ ಭಿನ್ನವಾಗಿದ್ದು, ಸಮಾಜದಲ್ಲಿ ಶಿಕ್ಷಣ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ, ಜಾತಿ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಶ್ರೀಗಳು ನಡೆಸಿದ್ದು ಒಂದು ಕ್ರಾಂತಿ. ಭೀಕರ ಬರಗಾಲದಲ್ಲಿ ಅನ್ನದಾಸೋಹ ನಡೆಸಿ, ಪ್ಲೇಗ್‌ ರೋಗ ಇಡೀ ಊರನ್ನೇ ಆವರಿಸಿದಾಗ ಜನರನ್ನು ಆರೈಕೆ ಮಾಡಿ, ಬಡಜನರಿಗೆ ದಾರಿ ಯಾದವರು ಶ್ರೀ ಕುಮಾರ ಶಿವಯೋಗಿಗಳು. ವೀರಶೈವ ಮಹಾಸಭಾ ಆರಂಭಿಸಿ, ಸಮಾಜಮುಖೀ ಕಾರ್ಯಗಳಿಗೆ ಹೇಗೆ ಹೆಸರಾಗಿದ್ದರು ಎಂಬುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಇನ್ನು, ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್‌, ಶಿವಯೋಗಿಗಳ ಪಾತ್ರ ನಿರ್ವಹಿಸಿದ್ದು, ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದಾರೆ. ಜೊತೆಯಲ್ಲಿ ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದರು ಅಭಿನಯಿಸಿದ್ದು, ಕೆಲ ಸ್ವಾಮಿಜಿಗಳ ಪಾತ್ರಗಳನ್ನು ಸ್ವತಃ ಸ್ವಾಮಿಜಿಗಳೇ ನಿರ್ವಹಿ ಸಿದ್ದಾರೆ. ಶ್ರೀ ಪಂಚಾಕ್ಷರಿಗವಾಯಿಗಳ ಸಂಗೀತ ಆರಂಭವಾ ಗಿದ್ದ ದಿನಗಳ ಕುರಿತ ಅಂಶವನ್ನು ಇಲ್ಲಿ ತೋರಿಸಲಾಗಿದೆ.

“ವಿರಾಟಪುರ ವಿರಾಗಿ’ ಚಿತ್ರ ಕಮರ್ಷಿಯಲ್‌ ಅಂಶಗಳಿಂದ ಹೊರತಾಗಿದ್ದು, ಕಮರ್ಷಿಯಲ್‌ ಚಿತ್ರಗಳಿಂದಾಚಿನ ಚಿತ್ರ ಬಯಸುವವರು ನೋಡಬಹುದಾದ ಚಿತ್ರ.

Advertisement

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next