ಮೊಹಾಲಿ: ಹಲವು ವಿಶೇಷತೆಗಳನ್ನು ಒಳಗೊಂಡ ಐತಿಹಾಸಿಕ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಭಾರತದ 35ನೇ ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಬಿಳಿ ಜೆರ್ಸಿಯಲ್ಲಿ ಇಂದು ಮುನ್ನಡೆಸುತ್ತಿದ್ದಾರೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ನಡುವೆ ಪ್ರವಾಸಿ ಶ್ರೀಲಂಕಾ ಪಾಲಿಗೂ ಇದು ಸ್ಮರಣೀಯ ಪಂದ್ಯ. ಅದು 300ನೇ ಟೆಸ್ಟ್ ಆಡಲಿಳಿದಿದೆ.
ಭಾರತದ ಅಗ್ರಗಣ್ಯ ಆಟಗಾರ ವಿರಾಟ್ ಕೊಹ್ಲಿ ಇಂದು ತಮ್ಮ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ವಿರಾಟ್ ಕೊಹ್ಲಿ 100ನೇ ಟೆಸ್ಟ್ ಆಡಲಿರುವ ಭಾರತದ 12ನೇ ಆಟಗಾರ. ನಿರೀಕ್ಷೆಯೆಂದರೆ, ಇತ್ತೀಚೆಗೆ ಶತಕದ ಬರಗಾಲದಲ್ಲಿರುವ ಕೊಹ್ಲಿ, ತಮ್ಮ “ಶತಕದ ಟೆಸ್ಟ್’ನಲ್ಲಿ ಶತಕ ಬಾರಿಸುವರೇ ಎಂಬುದು. ಭಾರತದ ಯಾವ ಬ್ಯಾಟರ್ ಗಳಿಂದಲೂ ಈ ಸಾಧನೆ ದಾಖಲಾಗಿಲ್ಲ. ಗಾವಸ್ಕರ್, ವೆಂಗ್‌ಸರ್ಕಾರ್, ಕಪಿಲ್, ಸಚಿನ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್, ಸೆಹವಾಗ್ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಇವರ್ಯಾರಿಗೂ ಸೆಂಚುರಿ ಒಲಿದಿರಲಿಲ್ಲ. ಇದೀಗ ಕೊಹ್ಲಿ ಸರದಿ. ವಿಶ್ವದ ಕೇವಲ 9 ಬ್ಯಾಟರ್‌ಗಳಷ್ಟೇ ತಮ್ಮ 100ನೇ ಟೆಸ್ಟ್‌ನಲ್ಲಿ ನೂರು ಬಾರಿಸಿದ್ದಾರೆ. ಇವರಲ್ಲಿ ಮೂವರು ಭಾರತದ ವಿರುದ್ಧ ಈ ಸಾಧನೆಗೈದಿದ್ದಾರೆ.
ಇದನ್ನೂ ಓದಿ:24 ವರ್ಷ ಬಳಿಕ ಪಾಕ್‌ನಲ್ಲಿ ಆಸೀಸ್ ಟೆಸ್ಟ್ ಸರಣಿ
ಟೆಸ್ಟ್ ಸ್ಪೆಷಲಿಸ್ಟ್ ಗಳಾದ ರಹಾನೆ ಮತ್ತು ಪೂಜಾರ ಬದಲಿಗೆ ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಲಾಗಿದೆ. ಮೂರು ಸ್ಪಿನ್ನರ್ ಗಳೊಂದಿಗೆ ತಂಡ ಕಣಕ್ಕಿಳಿದಿದ್ದು, ಅಶ್ವಿನ್, ಜಯಂತ್ ಯಾದವ್ ಮತ್ತು ಜಡೇಜಾ ಸ್ಪಿನ್ ದಾಳಿ ನಡೆಸಲಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ(ನಾ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ: ದಿಮುತ್ ಕರುಣಾರತ್ನೆ(ನಾ), ಲಹಿರು ತಿರಿಮನ್ನೆ, ಪಾತುಂ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ), ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೊ, ಲಸಿತ್ ಎಂಬುಲ್ದೇನಿಯ, ಲಹಿರು ಕುಮಾರ