ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಜನಪ್ರಿಯತೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನೂ ಹಿಂದಿಕ್ಕಿದ್ದು ನಂಬರ್ ವನ್ ಸ್ಥಾನಕ್ಕೇರಿದ್ದಾರೆ. ಸದ್ಯ ಕೊಹ್ಲಿ ಅವರಿಗೆ 3.5 ಕೋಟಿ ಮಂದಿಗೂ ಹೆಚ್ಚಿನ ಹಿಂಬಾಲಕರಿದ್ದಾರೆ.
ಇದು ಸಲ್ಮಾನ್‌ಗೆ ಹೋಲಿಸಿದರೆ 6 ಲಕ್ಷಕ್ಕೂ ಹೆಚ್ಚಾಗಿದೆ. ಸಲ್ಮಾನ್ ಸದ್ಯ 2ನೇ ಸ್ಥಾನದಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ತಂಡವನ್ನು ಫೈನಲ್‌ವರೆಗೆ ಕೊಹ್ಲಿ ಮುನ್ನಡೆಸಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಇವರನ್ನು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಕೊಹ್ಲಿ ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಅತೀ ಹೆಚ್ಚು ಲೈಕ್ ಪಡೆದ ತಾರೆ ಎನಿಸಿಕೊಂಡಿದ್ದರು. ಕೊಹ್ಲಿಗೆ ಟ್ವೀಟರ್‌ನಲ್ಲಿ 1.60 ಕೋಟಿ ಮಂದಿ, ಇನ್‌ಸ್ಟಾಗ್ರಾಮ್‌ನಲ್ಲಿ 1.40 ಕೋಟಿ ಹಿಂಬಾಲಕರಿದ್ದಾರೆ. ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ 3.4 ಕೋಟಿ, ಪ್ರಿಯಾಂಕಾ ಚೋಪ್ರಾ 3.1 ಕೋಟಿ, ಹನಿ ಸಿಂಗ್ 3 ಕೋಟಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 2.80 ಕೋಟಿ, ಶ್ರೇಯಾ ಘೋಷಲ್ 2.8 ಕೋಟಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ 2.7 ಕೋಟಿ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ 2.6 ಕೋಟಿ ಹಾಗೂ ಕಪಿಲ್ ಶರ್ಮ 2.6 ಕೋಟಿ ಅಭಿಮಾನಿಗಳನ್ನು ಹೊಂದುವುದರ ಮೂಲಕ ಕ್ರಮವಾಗಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿಗಿಂತ ಹೆಚ್ಚು ಫೇಸ್‌ಬುಕ್‌ನಲ್ಲಿ ಹಿಂಬಾಲಕರಿರುವುದು ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ. ಅವರಿಗೆ ಒಟ್ಟು 4.20 ಕೋಟಿ ಮಂದಿ ಹಿಂಬಾಲಕರಿದ್ದಾರೆ.
ಪಾಕ್‌ನಲ್ಲೂ ಕೊಹ್ಲಿಗೆ ಅಭಿಮಾನಿಗಳು: ಶೇ.83ರಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಭಾರತೀಯ ಅಭಿಮಾನಿಗಳೇ ಕೊಹ್ಲಿಗೆ ಇದ್ದಾರೆ. ಪಾಕಿಸ್ತಾನ ಭಾರತಕ್ಕೆ ವೈರಿ ರಾಷ್ಟ್ರವಾದರೂ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಿಂದಲೂ ಬಾರೀ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಪಾಕ್‌ನಲ್ಲಿರುವ ಕೊಹ್ಲಿ ಅಭಿಮಾನಿಗಳ ಸಂಖ್ಯೆ 1.10 ಕೋಟಿ, ಪಾಕ್‌ಗಿಂತ ಹೆಚ್ಚು ನೆರೆಯ ಬಾಂಗ್ಲಾದೇಶ 1.70 ಕೋಟಿ ಕೊಹ್ಲಿ ಅಭಿಮಾನಿಗಳನ್ನು ಹೊಂದಿದೆ. ನೇಪಾಳ 4.18 ಲಕ್ಷ ಅಭಿಮಾನಿಗಳನ್ನು ಹೊಂದಿದೆ. ಇತರೆ ರಾಷ್ಟ್ರಗಳಲ್ಲಿ ಒಟ್ಟಾರೆ ಶೇ 7.6ರಷ್ಟು ಅಭಿಮಾನಿಗಳು ಕೊಹ್ಲಿಗೆ ಇದ್ದಾರೆ.