ಲಂಡನ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಸರಾಗವಾಗಿ ರನ್ ಹರಿದು ಬಂದು ಸುಮಾರು ಸಮಯ ಕಳೆದಿದೆ. ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಬಗ್ಗೆ ವಿಶ್ವ ಕ್ರಿಕೆಟ್ ಚರ್ಚೆ ನಡೆಸುತ್ತಿದೆ. ಹಲವಾರು ಮಾಜಿ ಆಟಗಾರರು ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು, ಯುವ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುತ್ತಿದ್ದಾರೆ. ಇದರ ನಡುವೆ ಬಾಬರ್ ಅಜಂ, ಕೆವಿನ್ ಪೀಟರ್ಸನ್ ಮುಂತಾದ ದಿಗ್ಗಜರು ವಿರಾಟ್ ಪರವಾಗಿ ನಿಂತಿದ್ದಾರೆ.
ಇಂದು ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಸರಣಿಯ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಈ ಪ್ರವಾಸದಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಇದರ ಬಳಿಕ ಜಿಂಬಾಬ್ವೆ ಪ್ರವಾಸ ನಡೆಯಲಿದ್ದು, ಅದಕ್ಕೂ ಹಿರಿಯ ಆಟಗಾರರಿಗೆ ರೆಸ್ಟ್ ನೀಡುವ ಸಾಧ್ಯತೆಯಿದೆ.
ಹೀಗಾಗಿ ಇನ್ನು ವಿರಾಟ್ ಟೀಂ ಇಂಡಿಯಾ ಪರವಾಗಿ ಆಡುವುದು ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್ ನಲ್ಲಿ. ಸುಮಾರು 40 ದಿನಗಳ ವಿಶ್ರಾಂತಿ ಪಡೆಯಲಿರುವ ವಿರಾಟ್ ಹೊಸ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ:ಚೀನಾ ಆಟಗಾರ್ತಿಯನ್ನು ಸೋಲಿಸಿ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಪಿ.ವಿ.ಸಿಂಧು
ಇಂದಿನ ಪಂದ್ಯದ ಬಳಿಕ ಲಂಡನ್ ನಲ್ಲೇ ಉಳಿಯಲಿದ್ದಾರೆ. ಇಂಗ್ಲೆಂಡ್ ನ ಅಜ್ಞಾತ ಸ್ಥಳವೊಂದರಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ವಿರಾಟ್ ತಾಯಿ, ಪತ್ನಿ ಮತ್ತು ಮಗಳೊಂದಿಗೆ ವಿರಾಟ್ ಕೆಲವು ದಿನ ಕಾಲ ಕಳೆಯಲಿದ್ದಾರೆ. ಆಗಸ್ಟ್ ಒಂದರಿಂದ ಏಷ್ಯಾ ಕಪ್ ನ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ ಎಂದು ಟೈಮ್ಸ್ ನೌ ವರದಿ ಹೇಳಿದೆ.
ಈತನ್ಮಧ್ಯೆ, ಕೊಹ್ಲಿ ಹೊರತುಪಡಿಸಿ ಜಸ್ಪ್ರೀತ್ ಬುಮ್ರಾ ಕೂಡ ವೆಸ್ಟ್ ಇಂಡೀಸ್ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ. ರೋಹಿತ್ ಶರ್ಮಾ ಕೂಡಾ ಏಕದಿನ ಸರಣಿಗೆ ವಿಶ್ರಾಂತಿ ಪಡೆದ ಕಾರಣ ಶಿಖರ್ ಧವನ್ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ ನಡೆಯಲಿರುವ ಐದು ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ.