ಹೊಸದಿಲ್ಲಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿಗಳ ಘೋಷಣೆ ಯಾಗಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5ನೇ ಸಲ “ಅತ್ಯುತ್ತಮ ಅಂತಾರಾಷ್ಟ್ರೀಯ’ ಆಟಗಾರನಾಗಿ “ಪಾಲಿ ಉಮ್ರಿಗರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. 2016-17 ಹಾಗೂ 2017-18ನೇ ಸಾಲಿನ ಆಟಗಾರರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಯಾದಿಯನ್ನು ಅಂತಿಮಗೊಳಿಸಲಾಗಿದೆ. ಕೊಹ್ಲಿ ಈ ಎರಡೂ ಋತುಗಳ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. 2017-18ರ ಏಕದಿನದಲ್ಲಿ ಕೊಹ್ಲಿ 1,111 ರನ್ (ಸರಾಸರಿ 101.00), ಟೆಸ್ಟ್‌ನಲ್ಲಿ 896 ರನ್ (ಸರಾಸರಿ 89.60) ಬಾರಿಸಿದ್ದರು. ಇದೇ ವೇಳೆ ಶ್ರೀಲಂಕಾ ವಿರುದ್ಧ ಹೊಸದಿಲ್ಲಿ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 243 ರನ್ ಹೊಡೆದಿದ್ದರು.
ವನಿತಾ ಸಾಧಕಿಯರು
ಬಿಸಿಸಿಐ ಇದೇ ಮೊದಲ ಬಾರಿಗೆ ವನಿತಾ ಸಾಧಕಿಯರನ್ನೂ ಗುರುತಿಸಿ “ವರ್ಷದ ಆಟಗಾರ್ತಿ’ ಪ್ರಶಸ್ತಿ ಘೋಷಿಸಿದೆ. 2016-17ರ ಸಾಲಿನಲ್ಲಿ ಹರ್ಮನ್‌ಪ್ರೀತ್ ಕೌರ್, 2017-18ರ ಸಾಲಿನಲ್ಲಿ ಸ್ಮತಿ ಮಂಧನಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಜೀವಮಾನ ಸಾಧನೆಗಾಗಿ ನೀಡಲಾಗುವ “ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿ’ಗೆ ಆಯ್ಕೆಯಾದವರು ಭಾರತದ ಮಾಜಿ ಆರಂಭಕಾರ ಅಂಶುಮನ್ ಗಾಯಕ್ವಾಡ್. ವನಿತಾ ಕ್ರಿಕೆಟ್ ವಿಭಾಗದಲ್ಲಿ ಈ ಪ್ರಶಸ್ತಿ ಸುಧಾ ಶಾ ಪಾಲಾಗಿದೆ. ಮಾಜಿ ಕೀಪರ್ ಬುಧಿ ಕುಂದರನ್ “ಬಿಸಿಸಿಐ ವಿಶೇಷ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಗೈದ ವನಿತೆಯರಿಗಾಗಿ ನೀಡ ಲಾಗುವ ಪ್ರಶಸ್ತಿಗೆ ದೀಪ್ತಿ ಶರ್ಮ ಮತ್ತು ಜೆಮಿಮಾ ರೋಡ್ರಿಗಸ್ ಅವರನ್ನು ಆರಿಸಲಾಗಿದೆ.
ರಣಜಿಯಲ್ಲಿ ಸರ್ವಾಧಿಕ ರನ್ ಗಳಿಸಿದ ಮಾಯಾಂಕ್ ಅಗರ್ವಾಲ್, ಅತ್ಯಧಿಕ ವಿಕೆಟ್ ಕಿತ್ತ ಹಾಗೂ ಆಲ್‌ರೌಂಡ್ ಸಾಧನೆಗೈದ ಜಲಜ್ ಸಕ್ಸೇನಾ ಅವರನ್ನು ಮಾಧವರಾವ್ ಸಿಂಧಿಯಾ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ರಾಜ್ಯ ಕ್ರೀಡಾ ಮಂಡಳಿ ಪ್ರಶಸ್ತಿ “ಕ್ರಿಕೆಟ್ ಅಸೋಸಿ ಯೇಶನ್ ಆಫ್ ಬೆಂಗಾಲ್’ಗೆ ಒಲಿದಿದೆ. 9 ಪ್ರಶಸ್ತಿ ವಿಭಾಗಗಳ ಬಹು ಮಾನವನ್ನು ಈ ಬಾರಿ ಒಂದು ಲಕ್ಷ ರೂ.ನಿಂದ 1.5 ಲಕ್ಷ ರೂ.ಗೆ ಏರಿಸಲಾಗಿದೆ.