ಹೊಸದಿಲ್ಲಿ : ಮುಂಬರುವ ಅತ್ಯಂತ ಕಠಿನ ದಕ್ಷಿಣ ಆಫ್ರಿಕ ಕ್ರಿಕೆಟ್ ಪ್ರವಾಸವನ್ನು ದೃಷ್ಟಿಯಲ್ಲಿರಿಸಿಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಪ್ರವಾಸಿ ಲಂಕೆಯ ಎದುರಿನ ಏಕದಿನ ಸರಣಿಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ, ನಾಯಕತ್ವದ ಹೊಣೆಯನ್ನು ರೋಹಿತ್ ಶರ್ಮಾ ಹೆಗಲಿಗೇರಿಸಿದೆ.
3 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯು ಡಿಸೆಂಬರ್ 10ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ.
ಮುಂದಿನ ವರ್ಷ ಜನವರಿ 5ರಿಂದ ಆರಂಗೊಂಡು ಫೆ.24ರ ವರೆಗೆ ನಡೆಯಲಿರುವ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತ 3 ಟೆಸ್ಟ್ ಪಂದ್ಯಗಳು, ಆರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
ಪ್ರವಾಸಿ ಲಂಕೆಯ ವಿರುದ್ಧ ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಕೊಹ್ಲಿ ಲಂಕೆ ಎದುರಿನ ಟಿ-20 ಸರಣಿಯನ್ನೂ ತಪ್ಪಿಸಿಕೊಳ್ಳುವರೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಏಕದಿನ ಸರಣಿಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾಣೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಸಿದ್ಧಾರ್ಥ ಕೌಲ್.