Advertisement
ದ್ವಿತೀಯ ಟ್ವೆಂಟಿ20 ಪಂದ್ಯದಲ್ಲಿ ಧೋನಿ 37 ಎಸೆತಗಳಿಂದ 49 ರನ್ ಗಳಿಸಿದ್ದರು. ಆದರೂ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋಲನ್ನು ಕಂಡಿತ್ತು. ಧೋನಿ ಅವರು ಬಹಳಷ್ಟು ಡಾಟ್ ಎಸೆತ ಆಡಿದ್ದರು ಎಂದು ಟೀಕಾಕಾರರು ಹೇಳುವ ಮೂಲಕ ಅವರ ವೈಫಲ್ಯವನ್ನು ಎತ್ತಿ ತೋರಿಸಿದ್ದರು.
ಜನರೆಲ್ಲ ಅವರ ಬಗ್ಗೆ ಮಾತ್ರ ಯಾಕೆ ಹೀಗೆ ಹೇಳುತ್ತಾರೆಂದು ಗೊತ್ತಾಗುತ್ತಿಲ್ಲ. ಬ್ಯಾಟ್ಸ್‌ಮನ್ ಆಗಿ ನಾನು ಮೂರು ಬಾರಿ ವೈಫಲ್ಯ ಕಂಡರೂ ಯಾರೂ ಕೂಡ ನನ್ನ ವೈಫಲ್ಯದ ಬಗ್ಗೆ ಹೇಳುವುದಿಲ್ಲ. ಯಾಕೆಂದರೆ ನನಗೆ 35 ವರ್ಷ ಆಗಿಲ್ಲವಲ್ಲ ಎಂದು ಕೊಹ್ಲಿ ವ್ಯಂಗ್ಯವಾಗಿ ಹೇಳಿದರು. ಅವರು ಫಿಟ್ ಆಗಿದ್ದಾರೆ. ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಮೈದಾನದಲ್ಲಿ ಎಲ್ಲ ವಿಧಗಳಲ್ಲಿ ಅವರು ತಂಡಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಅವರು ಶ್ರೀಲಂಕಾ ಮತ್ತು ಆಸ್ಟ್ರೇಲಿಯ ವಿರುದ್ಧ ನಿಜವಾಗಿಯೂ ಉತ್ತಮ ನಿರ್ವಹಣೆ ನೀಡಿದ್ದರು ಎಂದು ಕೊಹ್ಲಿ ತಿಳಿಸಿದರು.
Related Articles
Advertisement
ಒತ್ತಡದ ಸನ್ನಿವೇಶಧೋನಿ ಬ್ಯಾಟಿಂಗಿಗೆ ಬರುವಾಗ ಇರುವ ಒತ್ತಡದ ಸನ್ನಿವೇಶವನ್ನು ಕೊಹ್ಲಿ ಸವಿವರರಾಗಿ ವಿವರಿಸಿದರು. ಅವರು ಬ್ಯಾಟಿಂಗಿಗೆ ಬರುವ ಸಮಯದಲ್ಲಿ ರನ್‌ರೇಟ್ ಓವರೊಂದಕ್ಕೆ 8.5ರಿಂದ 9.5ರಷ್ಟು ಇರುತ್ತದೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವುದಕ್ಕಿಂತ ಭಿನ್ನವಾಗಿ ಪಿಚ್ ಕೂಡ ಇರುತ್ತದೆ. ಅಗ್ರ ಕ್ರಮಾಂಕದದಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಬಳಿಕ ಸುಲಭವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಿರುತ್ತದೆ. ಆದರೆ ಕೆಳಗಿನ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್‌ಮನ್ ಒತ್ತಡದಿಂದಲೇ ಆಡಬೇಕಾಗುತ್ತದೆ ಎಂದು 29ರ ಹರೆಯದ ಕೊಹ್ಲಿ ಹೇಳಿದರು. ನಾವು ಪ್ರತಿಯೊಂದು ವಿಷಯವನ್ನು ಗಮನಿಸಬೇಕಾಗುತ್ತದೆ. ತಂಡದ ಸದಸ್ಯರು ಮತ್ತು ವ್ಯವಸ್ಥಾಪಕರು. ಬ್ಯಾಟಿಂಗ್ ಮಾಡಲು ಹೋಗುವಾಗ ಅಲ್ಲಿನ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಜನರ ಅಭಿಪ್ರಾಯದಿಂದ ನಾವು ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ಪಿಚ್ ಹೇಗೆ ವರ್ತಿಸುತ್ತದೆ ಮತ್ತು ನಾವು ಯಾವ ಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ತಿಳಿದು ಆಡಬೇಕಾಗುತ್ತದೆ ಎಂದು ಕೊಹ್ಲಿ ನುಡಿದರು. ಮೂರು ಏಕದಿನ ಪಂದ್ಯಗಳಲ್ಲಿ ಧೋನಿ ಅನುಕ್ರಮವಾಗಿ 25, 18 ಔಟಾಗದೆ ಮತ್ತು 25 ರನ್ ಗಳಿಸಿದ್ದರು. ಟ್ವೆಂಟಿ20ಯಲ್ಲಿ 7 ಔಟಾಗದೆ, 49 ಮತ್ತು 0 ಔಟಾಗದೆ ರನ್ ಮಾಡಿದ್ದರು. ಇದರಿಂದ ಕೊಹ್ಲಿಗೆ ಯಾವುದೇ ಚಿಂತೆಯಾಗಿಲ್ಲ. ಅವರು ನಿಜವಾಗಿಯೂ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ತನ್ನ ಆಟದ ಬಗ್ಗೆ ಕಠಿನ ಅಭ್ಯಾಸ ನಡೆಸುತ್ತಿದ್ದಾರೆ ಮತ್ತು ತನ್ನ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ ಪ್ರತಿ ಬಾರಿಯೂ ಒಳ್ಳೆಯ ನಿರ್ವಹಣೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಅವರು ದಿಲ್ಲಿಯಲ್ಲಿ ಸಿಕ್ಸರ್ ಬಾರಿಸಿದ್ದರು ಮತ್ತು ಅದನ್ನು ಪಂದ್ಯ ಮುಗಿದ ಬಳಿಕ ಐದು ಬಾರಿ ತೋರಿಸಿದರು. ಮುಂದಿನ ಪಂದ್ಯದಲ್ಲಿ ಅವರು ವಿಫಲರಾದಾಗ ವೈಫಲ್ಯವೆಂದು ಬಣ್ಣಿಸಿದರು ಎಂದು ಕೊಹ್ಲಿ ವಿವರಿಸಿದರು. ಧೋನಿ ಅವರ ವಿಷಯಕ್ಕೆ ಬಂದಾಗ ನಾವು ತಾಳ್ಮೆ ವಹಿಸುವುದು ಅಗತ್ಯ ಮತ್ತು ಅವರ ಕೊಡುಗೆ ಭಾರತ ತಂಡಕ್ಕೆ ಯಾವಾಗಲೂ ಬೇಕಾಗಿದೆ ಎಂದು ಕೊಹ್ಲಿ ತಿಳಿಸಿದರು.