Advertisement

ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

10:32 PM Jan 15, 2022 | Team Udayavani |

ಹೊಸದಿಲ್ಲಿ: ವಿರಾಟ್‌ ಕೊಹ್ಲಿ ದಿಢೀರನೆ ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಸಿಸಿಐ ಹಾಗೂ ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋತ ಒಂದೇ ದಿನದಲ್ಲಿ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

Advertisement

ಕಳೆದ ವರ್ಷದ ವಿಶ್ವಕಪ್‌ ಮುನ್ನ ಟಿ20 ನಾಯಕತ್ವವನ್ನು ತ್ಯಜಿ ಸುವುದಾಗಿ ಘೋಷಿಸಿದ್ದ ಕೊಹ್ಲಿ ಅದರಂತೆ ನಡೆದುಕೊಂಡಿದ್ದರು. ಆಗ ಟೆಸ್ಟ್‌ ಹಾಗೂ ಏಕದಿನ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸುವುದು ತಮ್ಮ ಉದ್ದೇಶ ಎಂದಿದ್ದರು. ಆದರೆ ಏಕದಿನ ನಾಯಕತ್ವದಿಂದ ಅವರನ್ನು ಕೆಳಗಿಳಿಸಲಾಯಿತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ವಿಮಾನ ಏರುವ ಮುನ್ನ ಈ ಘಟನಾವಳಿಯ ಸಂಪೂರ್ಣ ಚಿತ್ರಣವನ್ನು ಬಿಚ್ಚಿಟ್ಟ ಕೊಹ್ಲಿ, ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೆ ಸವಾಲೆಸೆದು ಹೋಗಿದ್ದರು.

ಸಹಜವಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದು ಬಿಸಿಸಿಐಗೆ ತನ್ನ ತಾಕತ್ತು ತೋರಿಸುವ ಯೋಜನೆ ಕೊಹ್ಲಿ ಅವರದಾಗಿತ್ತು. ಸೆಂಚುರಿಯನ್‌ ಟೆಸ್ಟ್‌ ಗೆದ್ದಾಗ ಒಂದು ಹಂತದ ಯಶಸ್ಸು ಕಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸಲ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಎಲ್ಲ ಸಾಧ್ಯತೆಯೂ ಕೊಹ್ಲಿ ಪಡೆಯ ಮುಂದಿತ್ತು. ಆದರೆ ಮುಂದಿನೆರಡು ಟೆಸ್ಟ್‌ಗಳ ಫ‌ಲಿತಾಂಶ ಉಲ್ಟಾ ಹೊಡೆಯಿತು. ಬಹುಶಃ ಕೊಹ್ಲಿ ಇದರ ನೈತಿಕ ಹೊಣೆ ಹೊತ್ತು ಕ್ಯಾಪ್ಟನ್ಸಿ ಬಿಟ್ಟರು ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ.

ಸರಣಿಯ ದ್ವಿತೀಯ ಟೆಸ್ಟ್‌ನಲ್ಲಿ ಕೊಹ್ಲಿ ಆಡಿರಲಿಲ್ಲ. ಅಲ್ಲಿ ಎಡವಿದ ಟೀಮ್‌ ಇಂಡಿಯಾ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕನಿಷ್ಠ ಸರಣಿ ಸಮಬಲದಲ್ಲಿ ಮುಗಿದಿದ್ದರೂ ಕೊಹ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದೊಂದು ನಂಬಿಕೆೆ.

ಯಶಸ್ವಿ ಟೆಸ್ಟ್‌ ನಾಯಕ
2014ರ ಆಸ್ಟ್ರೇಲಿಯ ಪ್ರವಾಸದ ನಡುವಲ್ಲೇ ಮಹೇಂದ್ರ ಸಿಂಗ್‌ ಧೋನಿ ಟೆಸ್ಟ್‌ ನಾಯಕತ್ವಕ್ಕೆ ದಿಢೀರ್‌ ರಾಜೀನಾಮೆ ಎಸೆದಾಗ ಟೀಮ್‌ ಇಂಡಿಯಾ ಜವಾಬ್ದಾರಿ ವಿರಾಟ್‌ ಕೊಹ್ಲಿ ಹೆಗಲೇರಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಅವರು ಅನೇಕ ಐತಿಹಾಸಿಕ ಗೆಲುವುಗಳಿಗೆ ಸಾಕ್ಷಿಯಾದರು. 2018-19ರಲ್ಲಿ ಆಸ್ಟ್ರೇಲಿಯದ ನೆಲದಲ್ಲಿ ಸರಣಿ ಜಯಿಸಿದ್ದು, ಮುಂದಿನ ವರ್ಷವೇ ಇಂಗ್ಲೆಂಡ್‌ನ‌ಲ್ಲಿ ಮೇಲುಗೈ ಸಾಧಿಸಿದ್ದೆಲ್ಲ ಕೊಹ್ಲಿ ನಾಯಕತ್ವದ ಯಶಸ್ಸಿಗೆ ಸಾಕ್ಷಿ.

Advertisement

2014-2022ರ ತನಕ 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ ಕೊಹ್ಲಿ 40ರಲ್ಲಿ ಜಯ ತಂದಿತ್ತಿದ್ದಾರೆ. 17ರಲ್ಲಿ ಸೋಲು ಎದುರಾಗಿದೆ. 11 ಟೆಸ್ಟ್‌ ಡ್ರಾಗೊಂಡಿದೆ. ಗೆಲುವಿನ ಪ್ರತಿಶತ ಸಾಧನೆ 58.82.

“ಪ್ರಾಮಾಣಿಕತೆಯಿಂದ ಕೆಲಸ ನಿಭಾಯಿಸಿದ್ದೇನೆ’
“ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಕಳೆದ 7 ವರ್ಷಗಳ ಕಾಲ ಪ್ರತಿದಿನವೂ ಕಠಿನ ಪರಿಶ್ರಮ ಪಟ್ಟಿದ್ದೇನೆ. ನನ್ನ ಕೆಲಸವನ್ನು ಪೂರ್ತಿ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಎಲ್ಲದಕ್ಕೂ ಒಂದು ಹಂತದಲ್ಲಿ ಅಂತ್ಯ ಎಂಬುದಿರುತ್ತದೆ. ಭಾರತದ ಟೆಸ್ಟ್‌ ನಾಯಕನಾಗಿ ನನಗೆ ಈ ಸಂದರ್ಭ ಅಂತ್ಯದ್ದೆಂದು ಭಾವಿಸುತ್ತೇನೆ’ ಎಂದು ವಿರಾಟ್‌ ಕೊಹ್ಲಿ ಪೋಸ್ಟ್‌ ಮಾಡಿದ್ದಾರೆ.

“ನಾಯಕತ್ವದ ಪ್ರಯಾಣದುದ್ದಕ್ಕೂ ಸಾಕಷ್ಟು ಏರಿಳಿತ ಹಾಗೂ ಕೆಲವು ಕುಸಿತವನ್ನೂ ಅನುಭವಿಸಿದ್ದೇನೆ. ಆದರೆ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ನನ್ನನ್ನು ಕಾಡಿರಲಿಲ್ಲ. ನಾನು ಯಾವತ್ತೂ ಎಲ್ಲದಕ್ಕೂ 120ರಷ್ಟು ಪ್ರತಿಶತ ಪ್ರಯತ್ನ ನೀಡುತ್ತೇನೆ ಎಂದು ನಂಬಿದವನು. ಹಾಗೆಯೇ ಮಾಡಿದ್ದೇನೆ. ಇದು ಸಾಧ್ಯವಾಗದಿದ್ದಾಗ, ಇದು ಸರಿಯಾದ ಕೆಲಸವಲ್ಲ ಎಂಬುದೂ ತಿಳಿದಿದೆ.

ನನ್ನ ಹೃದಯದಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ. ನನ್ನ ತಂಡಕ್ಕೆ ನಾನು ಯಾವತ್ತೂ ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ. ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಬಿಸಿಸಿಐಗೆ, ಅಂದಿನ ಕೋಚ್‌ ರವಿಶಾಸ್ತ್ರಿಗೆ ಹಾಗೂ ನನ್ನಲ್ಲಿ ನಾಯಕತ್ವದ ಗುಣವಿದೆ ಎಂಬುದನ್ನು ಗುರುತಿಸಿದ ಧೋನಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next