ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೋವಿಡ್ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಎಲ್ಲರೂ ಕಟ್ಟುನಿಟ್ಟಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಐಪಿಎಲ್ ಟೋರ್ನಿಯಲ್ಲಿ ಬ್ಯುಝಿಯಾಗಿರುವ ವಿರಾಟ್, ಇದೀಗ ಮಹಾಮಾರಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಈ ನಿಟ್ಟಿದಲ್ಲಿ ದೇಶದ ಜನರಿಗೆ ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿರುವ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ದೇಶವು ಎರಡನೇ ಬಾರಿ ಕೋವಿಡ್ ಅಲೆಗೆ ಸಿಲುಕಿದೆ. ಈ ವೈರಸ್ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಹೋಗಬೇಡಿ. ಅಗತ್ಯ ವಸ್ತುಗಳ ಖರೀದಿಗೆ ಹೋಗುವಾಗ ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೆ ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಕೊಹ್ಲಿ ವಿನಂತಿಸಿಕೊಂಡಿದ್ದಾರೆ.
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೆ ಪಾಲಿಸಿ ಎಂದು ಹೇಳಿರುವ ವಿರಾಟ್, ಕೋವಿಡ್ ವಿರುದ್ಧ ಹೋರಾಟಕ್ಕೆ ಪೊಲೀಸ್ ಹಾಗೂ ಸರ್ಕಾರದ ಜತೆ ಕೈ ಜೋಡಿಸಿ. ನಾನು ಈ ಮೊದಲೇ ಹೇಳಿದಂತೆ ನಾವು ಸುರಕ್ಷಿತವಾಗಿದ್ದರೆ ದೇಶವೂ ಸುರಕ್ಷತೆಯಿಂದ ಇದ್ದಹಾಗೆ. ಕೋವಿಡ್ ವಿರುದ್ಧ ಜಾಗೃತಿ ವಹಿಸಿಕೊಳ್ಳುವುದು ಹಾಗೂ ಇತರರಿಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.