ಹಾವೇರಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಹಿನ್ನಲೆಯಲ್ಲಿ ಜನರು ಸ್ವತಃ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಬಿಟ್ಟು ತಾವು ತಂದ ಚೀಲಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡ ವಿಚಿತ್ರ ಘಟನೆಗೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಜನತಾ ಬಜಾರ್ ಎದುರಿಗೆ ನಡೆದಿದ್ದು, ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಎಲ್ಲ ಅಗತ್ಯ ವಸ್ತುಗಳ ಅಂಗಡಿ ಎದುರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಗುರುತುಗಳನ್ನು ಹಾಕುವ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ರಟ್ಟಿಹಳ್ಳಿಯ ಜನತಾ ಬಜಾರ್ ಎದುರು ಸಹ ಮೂರಡಿ ಅಂತರದಲ್ಲಿ ಚೌಕ ಗುರುತು ಹಾಕಲಾಗಿತ್ತು. ಆದರೆ ಪಡಿತರ ಪಡೆಯಲು ಬಂದ ಜನರು ಈ ಚೌಕದಲ್ಲಿ ನಿಂತು ಸಾಮಾಜಿಕ ಅಂತರ ಕಾದುಕೊಳ್ಳುವ ಬದಲಿಗೆ ತಾವು ತಂದ ಚೀಲಗಳನ್ನು ಈ ಚೌಕಗಳಲ್ಲಿ ಸರದಿಯ ಗುರುತಿಗಾಗಿ ಇಟ್ಟು ತಾವೆಲ್ಲ ಒಂದೆಡೆ ನೆರಳಲ್ಲಿ ಗುಂಪಾಗಿ ಕುಳಿತು, ಮಾತುಕತೆಯಲ್ಲಿ ತೊಡಗಿದ್ದಾರೆ.
ಸಾಮಾಜಿಕ ಅಂತರ ಕಾಯುವ ಈ ಚೌಕಗಳಲ್ಲಿ ಜನರು ನಿಲ್ಲದೇ ಇರಲು ಬಿಸಿಲು ಹೆಚ್ಚಾಗಿರುವುದೇ ಕಾರಣವಾದರೂ ಜನರಿಗೆ ಈ ಚೌಕ ಹಾಕಿರುವ ಉದ್ದೇಶವೇ ಅರ್ಥವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿತ್ತು. ಸರ್ಕಾರ, ಅಧಿಕಾರಿಗಳು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಏನೆಲ್ಲ ಕಸರತ್ತು ನಡೆಸಿದ್ದಾರೆ. ಆದರೆ, ಬಹುತೇಕ ಜನರಿಗೆ ಸರ್ಕಾರ, ಅಧಿಕಾರಿಗಳ ಉದ್ದೇಶವೇ ಜನರಿಗೆ ಅರ್ಥವಾಗಿಲ್ಲ ಎನ್ನಲು ಇದುವೇ ಸಾಕ್ಷಿಯಾಗಿದೆ.