Advertisement

Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!

06:05 PM Jan 15, 2025 | Team Udayavani |

ಕಣ್ಣೂರು: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನೆಂದು ಘೋಷಿಸಲಾಗಿದ್ದ ವ್ಯಕ್ತಿಯೊಬ್ಬ ಶವಾಗಾರದಲ್ಲಿ ಜೀವಂತವಾದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

Advertisement

ಇತ್ತೀಚೆಗೆ ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿ ಪವಿತ್ರನ್ ಎನ್ನುವ 67 ವರ್ಷದ ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದಿನಕಳೆದಂತೆ ಪವಿತ್ರನ್‌ ಅವರ ಆರೋಗ್ಯ ಸ್ಥಿತಿ ಹದಗೆಡಲು ಶುರುವಾಗಿತ್ತು. ಪರಿಣಾಮ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ವೆಚ್ಚ ದುಬಾರಿ ಆದ ಕಾರಣದಿಂದ ಮನೆಯವರು ಪವಿತ್ರನ್‌ ಅವರನ್ನು ಸೋಮವಾರ(ಜ.12ರಂದು) ಅವರ ಸ್ವಗ್ರಾಮಕ್ಕೆ ಕರೆತರಲು ನಿರ್ಧರಿಸಿದ್ದರು ಎಂದು ವರದಿ ತಿಳಿಸಿದೆ.

ವೆಂಟಿಲೇಟರ್ ಇಲ್ಲದೆ ಪವಿತ್ರನ್ ಬದುಕುಳಿಯುವುದಿಲ್ಲ ಮತ್ತು ಅದನ್ನು ತೆಗೆದರೆ 10 ನಿಮಿಷಗಳಲ್ಲಿ ಅವರು ಮೃತಪಡುತ್ತಾರೆ ಎಂದು ಮಂಗಳೂರಿನ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಅಲ್ಲಿಂದ ಶಿಫ್ಟ್‌ ಆದ ಬಳಿಕ ಪವಿತ್ರನ್ ಕಣ್ಣು ತೆರೆದಿರಲಿಲ್ಲ ಮತ್ತು ಅವರ ರಕ್ತದೊತ್ತಡ ತೀವ್ರವಾಗಿ ಕುಸಿದಿತ್ತು. ಇದರಿಂದ ಪವಿತ್ರನ್‌ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಭಾವಿಸಿದ್ದರು.

ಪವಿತ್ರನ್‌ ಅವರ ಪತ್ನಿ ಮತ್ತು ಸಹೋದರಿ ಆಂಬ್ಯುಲೆನ್ಸ್‌ನಲ್ಲಿ ಬಂದಿದ್ದರು. ಇತರ ಕಾರಿನಲ್ಲಿ ಹಿಂಬಾಲಿಸಿದ್ದರು. ಸ್ವಗ್ರಾಮಕ್ಕೆ ಪವಿತ್ರನ್‌ ದೇಹವನ್ನು ತಂದ ಬಳಿಕ ಕುಟುಂಬಸ್ಥರು ಅವರ ಶವವನ್ನು ಎಕೆಜಿ ಆಸ್ಪತ್ರೆಗೆ ತಂದು ಶವಾಗಾರದಲ್ಲಿರಿಸಿ ಮಂಗಳವಾರ (ಜ.13ರಂದು) ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು.

Advertisement

ಆಸ್ಪತ್ರೆಯ ಶವಾಗಾರಕ್ಕೆ ಆಂಬ್ಯುಲೆನ್ಸ್‌ ಬಂದಾಗ ಆ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿಗೆ ಏನೋ ಒಂದು ವಿಚಿತ್ರ ಸನ್ನಿವೇಶ ಎದುರಾಗಿದೆ. ಮೃತಪಟ್ಟಿದ್ದಾರೆ ಎನ್ನಲಾದ ಪವಿತ್ರನ್‌ ಅವರ ಕೈಗಳು ನಡುಗುವುದನ್ನು ಜಯನ್‌ ಗಮನಿಸಿದ್ದಾರೆ.

ಕೂಡಲೇ ಜಯನ್‌ ಎಲೆಕ್ಟ್ರಿಷಿಯನ್ ಅನೂಪ್ ಅವರನ್ನು ಕರೆದಿದ್ದಾರೆ. ಈ ಬಗ್ಗೆ ಸಿಬ್ಬಂದಿಗಳು ಪವಿತ್ರನ್‌ ಸಂಬಂಧಿಗಳು ಹಾಗೂ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಪವಿತ್ರನ್‌ ಅವರ ರಕ್ತದೊತ್ತಡವನ್ನು ಪರೀಕ್ಷಿಸಿದಾಗ ಅದು ನಾರ್ಮಲ್‌ ಎಂದು ತೋರಿಸಿದೆ. ಇದಾದ ಬಳಿಕ ಪವಿತ್ರನ್‌ ಅವರನ್ನು ಐಸಿಯು ಘಟಕಕ್ಕೆ ಶಿಫ್ಟ್‌ ಮಾಡಲಾಗಿದೆ.

ಪವಿತ್ರನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಬುಧವಾರ (ಜ.15ರಂದು) ತಿಳಿಸಿರುವುದಾಗಿ ವರದಿ ತಿಳಿಸಿದೆ.

ಪವಿತ್ರನ್‌ ತಮ್ಮ ಹೆಸರನ್ನು ಕರೆಯುವಾಗ ತನ್ನ ಕಣ್ಣುಗಳನ್ನು ತೆರೆದು ಜನರನ್ನು ನೋಡುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದ್ದರೂ, ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಪವಿತ್ರನ್‌ ನಿಧನರಾಗಿದ್ದಾರೆ ಎಂದು ಸ್ಥಳೀಯ ಕೆಲ ಪತ್ರಿಕೆಗಳಲ್ಲಿ ಶ್ರದ್ಧಾಂಜಲಿಯಾಗಿ ಫೋಟೋ ಪ್ರಕಟಿಸಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸಲು ಅನೇಕರು ಅವರ ಮನೆಗೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.