ರಾಂಚಿ: ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ನಾಲ್ಕು ಮಕ್ಕಳ ತಾಯಿ, ಪಾಕ್ ಮಹಿಳೆ ಸೀಮಾ ಹೈದರ್ ಅವರ ವಿಚಾರ ಸುದ್ದಿಯಲ್ಲಿರುವಾಗಲೇ ಇದೀಗ ಅಂಥದ್ದೇ ಘಟನೆಯೊಂದು ಜಾರ್ಖಂಡ್ ನ ಹಜಾರಿಬಾಗ್‌ನ ಖುತ್ರಾ ಗ್ರಾಮದಲ್ಲಿ ನಡೆದಿದೆ.
ಪೋಲೆಂಡ್ ದೇಶದ ಬಾರ್ಬರಾ ಪೋಲಾಕ್ ತನ್ನ 6 ವರ್ಷದ ಮಗಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಜಾರ್ಖಂಡ್ ನ ಹಜಾರಿಬಾಗ್‌ನ ಖುತ್ರಾ ಗ್ರಾಮದ 35 ವರ್ಷದ ಶಾದಾಬ್ ಮಲ್ಲಿಕ್ ಅವರಿಗಾಗಿ ಭಾರತಕ್ಕೆ ಬಂದಿದ್ದಾರೆ.
2021 ರಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ 47 ವರ್ಷದ ಬಾರ್ಬರಾ ಪೋಲಾಕ್ ಹಾಗೂ ಶಾದಾಬ್ ಮಲ್ಲಿಕ್ ಅವರು ಸ್ನೇಹಿತರಾಗಿದ್ದಾರೆ. ಸ್ನೇಹಿತರಾಗಿ ಪರಸ್ಪರ ಚಾಟಿಂಗ್ ಮಾಡುತ್ತಿದ್ದವರು ಆತ್ಮೀಯರಾಗಿದ್ದಾರೆ. ಈ ಆತ್ಮೀಯತೆ ಇಬ್ಬರ ನಡುವೆ ಪ್ರೇಮ ಹುಟ್ಟುವಂತೆ ಮಾಡಿದೆ. ತನ್ನ ಪ್ರಿಯಕರ ಮಲ್ಲಿಕ್ ನನ್ನು ನೋಡಲು ಪೋಲೆಂಡ್ ನಿಂದ ಪ್ರವಾಸಿ ವೀಸಾದಿಂದ ತನ್ನ 6 ವರ್ಷದ ಮಗಳೊಂದಿಗೆ ಬಾರ್ಬರಾ ಪೋಲಾಕ್ ಜಾರ್ಖಂಡ್ ನ ಹಜಾರಿಬಾಗ್‌ನ ಖುತ್ರಾ ಗ್ರಾಮಕ್ಕೆ ಬಂದಿದ್ದಾರೆ.
ಈ ಹಿಂದೆಯೇ ಬಾರ್ಬರಾ ಪೋಲಾಕ್ ಅವರು ತನ್ನ ಪತಿಯಿಂದ ವಿಚ್ಛೇದನವನ್ನು ಪಡೆದಿದ್ದು, ಮಲ್ಲಿಕ್ ಅವರೊಂದಿಗೆ ಪ್ರೇಮವಾದ ಬಳಿಕ, ಇದೀಗ ಇಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಜಾರಿಬಾಗ್ ಎಸ್ ಡಿಎಂ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪೋಲೆಂಡ್ ನಿಂದ ಭಾರತಕ್ಕೆ ಬಂದಾಗ ಬಾರ್ಬರಾ ಮೊದಲು ಹೊಟೇಲ್ ನಲ್ಲಿದ್ದರು. ಆ ಬಳಿಕ ನಮ್ಮ ಗ್ರಾಮಕ್ಕೆ ಬಂದಿದ್ದಾರೆ. ಇಲ್ಲಿ ಅವರಿಗೆ ಅತಿಯಾದ ಸೆಕೆಯಾದ ಪರಿಣಾಮ ನಾವು ಎಸಿ ಹಾಗೂ ಅವರ ಕೋಣೆಗೆ ಹೊಸ ಕಾಲರ್ ಟಿವಿಯನ್ನು ಅಳವಡಿಸಿದ್ದೇವೆ ಎಂದು ಪ್ರಿಯಕರ ಮಲ್ಲಿಕ್ ಹೇಳುತ್ತಾರೆ.
ಇನ್ನೊಂದೆಡೆ ಬಾರ್ಬರಾ ಮಲ್ಲಿಕ್ ಅವರಿಗೆ ಮನೆ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಾರೆ. ಹಸುವಿನ ಸಗಣಿ ಸ್ವಚ್ಛಗೊಳಿಸುವ ಕೆಲಸ, ಅಂಗಳ ಗುಡಿಸುವ ಮುಂತಾದ ಕೆಲಸವನ್ನು ಅವರು ಗ್ಲೋಸ್ ಹಾಕಿಕೊಂಡು ಮಾಡುತ್ತಿದ್ದಾರೆ. ಮಲ್ಲಿಕ್ ಅವರು ಒಬ್ಬ ಉತ್ತಮ ಗುಣದ ವ್ಯಕ್ತಿತ್ವವುಳ್ಳವರೆಂದು ಬಾರ್ಬರಾ ಹೇಳುತ್ತಾರೆ.
ಇತ್ತ ವಿದೇಶಿ ಮಹಿಳೆ ಗ್ರಾಮಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಹಜಾರಿಬಾಗ್ ಪ್ರಧಾನ ಕಚೇರಿಯ ಡಿಎಸ್‌ಪಿ ರಾಜೀವ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಅಭಿಷೇಕ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪೋಲಾಕ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ತನ್ನ ವೀಸಾವನ್ನು ಪೊಲೀಸ್ ಅಧಿಕಾರಿಗಳಿಗೆ ತೋರಿಸಿ, ಮುಂದಿನ ದಿನಗಳಲ್ಲಿ ತನ್ನ ದೇಶಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.