Advertisement

ಕ್ರೀಡಾಂಗಣದಲ್ಲೂ ವಿಐಪಿ ಸಂಸ್ಕೃತಿ ತರವಲ್ಲ

02:39 AM May 28, 2022 | Team Udayavani |

ಐಎಎಸ್‌, ಐಪಿಎಸ್‌ ಹಾಗೂ ರಾಜಕಾರಣಿಗಳ ವಿಐಪಿ ಸಂಸ್ಕೃತಿ ಎಲ್ಲರಿಗೂ ಗೊತ್ತಿರುವ ವಿಚಾರ. ತಮಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಅನುಕೂಲ ಪಡೆಯುವುದು ಅಥವಾ ತಮಗಿಂತ ಕೆಳಗಿನವರನ್ನು ತಮಗೆ ಬೇಕಾದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಾವು ಆಗಾಗ ನೋಡುತ್ತಲೇ ಇದ್ದೇವೆ. ಈ ಘಟನೆಗಳು

Advertisement

ಬಹಿರಂಗವಾದ ಮೇಲೆ, ಇಂಥ ಸಂಸ್ಕೃತಿಗಳ ವಿರುದ್ಧ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತದೆ. ಅನಂತರದಲ್ಲಿ ಎಲ್ಲವೂ ಸ್ತಬ್ಧವಾಗುತ್ತದೆ.

ಈಗಲೂ ದಿಲ್ಲಿಯ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ದಿಲ್ಲಿ ಸರಕಾರದ ಐಎಎಸ್‌ ಅಧಿಕಾರಿಗಳಾದ ಸಂಜೀವ್‌ ಖೀರ್ವಾರ್‌ ಮತ್ತು ರಿಕು ದುಗ್ಗಾ ಅವರು ಈ ಕ್ರೀಡಾ ಸಂಕೀರ್ಣವನ್ನು ತಮ್ಮ ವಾಕಿಂಗ್‌ ಮತ್ತು ನಾಯಿಯ ಓಡಾಟಕ್ಕೆ ಬಳಸಿಕೊಂಡಿದ್ದಾರೆ. ಅದು ರಾತ್ರಿ 10ರ ವರೆಗೆ ನಡೆಯಬೇಕಾಗಿದ್ದ ಕ್ರೀಡಾ ತರಬೇತಿಯನ್ನು ಸಂಜೆ 7 ಗಂಟೆಗೇ ಪೂರ್ಣಗೊಳಿಸಿ ಹೋಗುವಂತೆ ಕ್ರೀಡಾಪಟುಗಳಿಗೆ ಸೂಚಿಸಿ, ಬಳಿಕ ಇವರು ಟ್ರ್ಯಾಕ್‌ ಮೇಲೆಯೇ ನಾಯಿ ಕರೆದುಕೊಂಡು ದಿನವೂ ವಾಕಿಂಗ್‌ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ವಿಶ್ಲೇಷಿಸಿ ಹೇಳುವುದಾದರೆ ಇದೊಂದು ತೀರಾ ನಾಚಿಕೆಗೇಡಿನ ಕೃತ್ಯ. ದೇಶದಲ್ಲಿ ಕ್ರೀಡೆಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ, ಅವರ ತರಬೇತಿಗೂ ಸಾಕಷ್ಟು ಮೈದಾನ ಸಿಗುತ್ತಿಲ್ಲ, ಸಿಕ್ಕರೂ ಅಲ್ಲಿ ಮೂಲಭೂತ ಸೌಲಭ್ಯಗಳೇ ಇರುವುದಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಲೇ ಇವೆ. ಆದರೆ ಎಲ್ಲ ವ್ಯವಸ್ಥೆ ಇರುವ ತ್ಯಾಗರಾಜ ಕ್ರೀಡಾ ಸಂಕೀರ್ಣವನ್ನು ಯಾರೋ ಇಬ್ಬರು ಐಎಎಸ್‌ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿರುವುದು ಸಮಾಜ ಒಪ್ಪುವಂಥ ಕೆಲಸ ಅಲ್ಲವೇ ಅಲ್ಲ.

ಸದ್ಯ ಕೇಂದ್ರ ಗೃಹ ಇಲಾಖೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಈ ಸಂಜೀವ್‌ ಖೀರ್ವಾರ್‌ ಮತ್ತು ರಿಕು ದುಗ್ಗಾ ದಂಪತಿಯನ್ನು ಕಡ್ಡಾಯ ವರ್ಗಾವಣೆ ಮಾಡಿದೆ. ಒಬ್ಬರನ್ನು ಲಡಾಖ್‌ಗೆ, ಮತ್ತೂಬ್ಬರನ್ನು ಅರುಣಾಚಲ ಪ್ರದೇಶಕ್ಕೆ ಕಳುಹಿಸಲಾಗಿದೆ. ಇದು ಶಿಕ್ಷೆಯ ವರ್ಗಾವಣೆ ಎಂದು ಹೇಳಬಹುದಾದರೂ ಇವರಿಗೆ ನೀಡಿರುವ ಶಿಕ್ಷೆ ಮಾತ್ರ

ಕಡಿಮೆಯೇ.  ಇಲ್ಲಿ ಒಂದು ಗಮನಿಸಲೇಬೇಕಾದ ಸಂಗತಿಯೊಂದಿಗೆ. ತಾವು ವಿಐಪಿ ಎಂಬ ಭಾವನೆಯೊಂದಿಗೆ, ಸಾಮಾನ್ಯ ಜನರಿಗೆ ಇಲ್ಲದ

Advertisement

ಸವಲತ್ತನ್ನು ಬಳಸಿಕೊಳ್ಳಲು ಹೋಗುವುದು ಸರಿಯಲ್ಲ. ಈ ವಿಚಾರದಲ್ಲಿ ನಾವು ಪಾಶ್ಚಾತ್ಯ ರಾಜಕಾರಣಿಗಳನ್ನು ನೋಡಿ ತಿಳಿದುಕೊಳ್ಳಬಹುದು. ಇಂದಿಗೂ ಬ್ರಿಟನ್‌ನಲ್ಲಿ ಅಧಿಕಾರಸ್ಥರೂ ಸಾಮಾನ್ಯರಂತೆಯೇ ಇರುತ್ತಾರೆ. ಸಮಯ ಸಿಕ್ಕಾಗ ಮೆಟ್ರೋದಲ್ಲಿ ಓಡಾಡುತ್ತಾರೆ. ಸಾರ್ವಜನಿಕ ಸಾರಿಗೆಯನ್ನೂ ಬಳಕೆ ಮಾಡುತ್ತಾರೆ. ನಮ್ಮ ದೇಶದಲ್ಲಿ ಇಂಥ ಬೆಳವಣಿಗೆ

ಕಷ್ಟವೆಂದು ಭಾವಿಸಿದರೂ, ಕಡೇ ಪಕ್ಷ ಜನರಿಗೆ ತೊಂದರೆಯಾಗದಂತೆ ಇರುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳ ಕರ್ತವ್ಯವಾಗಿದೆ.

ವಿಐಪಿ ಸಂಸ್ಕೃತಿ ಎಂದಾಕ್ಷಣ ನಮ್ಮ ದೇಶದಲ್ಲಿ ಮತ್ತೆ ಮತ್ತೆ ಹೆಚ್ಚಾಗಿ ಚರ್ಚೆಗೆ ಬರುವುದು ಝೀರೋ ಟ್ರಾಫಿಕ್‌ ಓಡಾಟ. ಸಮಯದ ನಿಮಿತ್ತ ಮುಖ್ಯಮಂತ್ರಿಗಳು, ರಾಜ್ಯಪಾಲರು, ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿದಂತೆ ಪ್ರಮುಖರಿಗೆ ಝೀರೋ ಟ್ರಾಫಿಕ್‌ ಕೊಡಲಾಗುತ್ತಿದೆ. ಆದರೆ ಇಂಥ ಹೊತ್ತಿನಲ್ಲೇ ಆ್ಯಂಬುಲೆನ್ಸ್‌ಗಳಿಗೂ ಅವಕಾಶ ಮಾಡಿಕೊಡದ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ಇಂಥ ವಿಚಾರದಲ್ಲಿಯೂ ಸರಕಾರಗಳು, ಅಧಿಕಾರಿ ವರ್ಗ ಸೂಕ್ಷ್ಮಮತಿಗಳಾಗಬೇಕಾದದ್ದು ಅತ್ಯವಶ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next