ಗಾಂಧಿನಗರ: ಕಾನೂನಬಾಹಿರವಾಗಿ ನಿರ್ಮಿಸಿದ್ದ ದರ್ಗಾವನ್ನು ತೆರವುಗೊಳಿಸಲು ಮುಂದಾದ ಅಧಿಕಾರಿಗಳ ವಿರುದ್ಧವೇ 500 ರಿಂದ 600 ಮಂದಿಯ ಗುಂಪೊಂದು ದಾಳಿ ನಡೆಸಿದ್ದು, ಗಲಭೆಯಲ್ಲಿ ಓರ್ವ ನಾಗರಿಕ ಮೃತಪಟ್ಟು, ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಗುಜರಾತ್‌ನಲ್ಲಿ ವರದಿಯಾಗಿದೆ.
ಜುನಾಗಢ ನಗರದ ಮಜೇವಾಡಿ ದರ್ವಾಜ ಬಳಿ ಇರುವ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಹಸ್ರತ್ ರೋಶನ್ ಶಾ ಪೀರ್ ಬಾಬಾ ದರ್ಗಾವನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭೂ ಮಾಲಿಕತ್ವಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪ್ರಸ್ತುತಪಡಿಸುಂತೆ ಜೂ.14ರಂದು ಜುನಾಗಢ ಪುರಸಭೆ ಅಧಿಕಾರಿಗಳು ದರ್ಗಾಗೆ ನೋಟಿಸ್ ನೀಡಿದ್ದಾರೆ.
ನೀಡಿದ್ದ 5 ದಿನಗಳ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ದರ್ಗಾದ ಮೇಲೆ ನೋಟಿಸ್ ಅಂಟಿಸಲೆಂದು ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ಇದ್ದಕ್ಕಿಂತ ಜನರ ಗುಂಪು ಅಧಿಕಾರಿಗಳ ಮೇಲೆ ದಾಳಿಗೆ ಮುಂದಾಗಿದೆ. ಅಲ್ಲದೇ, ಪ್ರದೇಶದ ಮುಖ್ಯರಸ್ತೆಗಳನ್ನು ನಿರ್ಬಂಧಿಸಿ, ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ವಾಹನಗಳು, ಬೈಕ್‌ಗಳಿಗೆ ಬೆಂಕಿ ಹಚ್ಚಿ, ದುಷರ್ಮಿಗಳು ಗಲಭೆ ಎಬ್ಬಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಓರ್ವ ನಾಗರಿಕ ಮೃತಪಟ್ಟಿದ್ದಾರೆ. ಕಲ್ಲು ತೂರಾಟದಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಖರ ಮಾಹಿತಿಗಾಗಿ ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ನಗರದ ಡಿವೈಎಸ್‌ಪಿ, ಮೂವರು ಸಬ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯ ಮೇಲೂ ಕಲ್ಲುತೂರಾಟ ನಡೆಸಿ ಅವರನ್ನು ಗಾಯಗೊಳಿಸಲಾಗಿದೆ.
174 ಮಂದಿಯ ಸೆರೆ: ಕಲ್ಲು ತೂರಾಟ ನಡೆಸಿದಲ್ಲದೇ, ವಾಹನಕ್ಕೂ ಬೆಂಕಿ ಹಚ್ಚಿ ಗಲಭೆಯನ್ನು ವಿಕೋಪಕ್ಕೆ ಕೊಂಡೊಯ್ದ ಹಿನ್ನೆಲೆ ಪೊಲೀಸರು ಜನರ ಗುಂಪಿನ ಮೇಲೆ ಆಶ್ರುವಾಯು ಪ್ರಯೋಗ ನಡೆಸಿದ್ದಾರೆ. ಅಲ್ಲದೇ, 174 ಮಂದಿಯನ್ನು ಸರೆ ಹಿಡಿದಿರುವುದಾಗಿ ಹೇಳಿದ್ದಾರೆ.