Advertisement

ಹರತಾಳ: ಕಲ್ಲು ತೂರಾಟ, ವಿವಿಧೆಡೆ ಹಿಂಸಾಚಾರ

05:02 AM Jan 04, 2019 | |

ಕಾಸರಗೋಡು: ಶಬರಿಮಲೆ ಕ್ಷೇತ್ರಕ್ಕೆ ಯುವತಿಯರ ಪ್ರವೇಶಕ್ಕೆ ಆಸ್ಪದ ನೀಡಿದ ಸರಕಾರದ ಕ್ರಮವನ್ನು ಖಂಡಿಸಿ ಗುರುವಾರ ನಡೆದ ಹರತಾಳ ಸಂದರ್ಭ ಕಾಸರಗೋಡು ಜಿಲ್ಲೆಯ ವಿವಿಧೆಡೆ ವ್ಯಾಪಕ ಕಲ್ಲು ತೂರಾಟ, ಹಿಂಸೆ, ಸಿಪಿಎಂ, ಬಿಜೆಪಿ ಕಚೇರಿಗಳಿಗೆ ಹಾನಿ, ರಸ್ತೆ ತಡೆ, ವಾಹನ-ಮನೆಗಳಿಗೆ ಕಲ್ಲೆಸೆತ ನಡೆಯಿತು. 

Advertisement

ಹಿಂಸಾನಿರತರನ್ನು ಚದುರಿಸಲು ವಿವಿಧೆಡೆ ಪೊಲೀಸರು ಲಾಠಿಪ್ರಹಾರ, ಅಶ್ರುವಾಯು ಪ್ರಯೋಗಿಸಿದರು. ಕಾಸರಗೋಡು ನಗರದಲ್ಲಿ ಹರತಾಳ ಬೆಂಬಲಿಗರು ಬೃಹತ್‌ ಮೆರವಣಿಗೆ ನಡೆಸಿದರು. ಕರಂದಕ್ಕಾಡು ಹನುಮಾನ್‌ ನಗರದಿಂದ ಆರಂಭಗೊಂಡ ಬೃಹತ್‌ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದಂತೆ ಬ್ಯಾಂಕ್‌ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪರಿಸರದಲ್ಲಿ ಪೊಲೀಸರು ಮೆರವಣಿಗೆಯನ್ನು ತಡೆದರು. ಮೆರವಣಿಗೆ ತಾಲೂಕು ಕಚೇರಿ ಪರಿಸರಕ್ಕೆ ಪ್ರವೇಶಿಸದಂತೆ ಪೊಲೀಸರು ವಿನಂತಿಸಿದ ಮೇರೆಗೆ ಏರ್‌ಲೈನ್ಸ್‌ ರಸ್ತೆಯಲ್ಲಿ ಕೆಪಿಆರ್‌ ರಾವ್‌ ರಸ್ತೆಯಾಗಿ ಮುಂದೆ ಸಾಗಿ ಎಂ.ಜಿ. ರಸ್ತೆಯಿಂದ ಹೊಸ ಬಸ್‌ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ವ್ಯಾಪಕ ಕಲ್ಲೆಸೆತ ನಡೆಯಿತು.

ಕಲ್ಲೆಸೆತದಿಂದ ಯುವಕನೋರ್ವ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಲಾಯಿತು. ಅಂಗಡಿಯೊಂದರ ಗಾಜು ಪುಡಿಯಾಗಿದೆ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರಿಗೂ ಬೆದರಿಕೆ ಹಾಕಲಾಯಿತು. ತೆರೆದಿದ್ದ ಫ್ಯಾನ್ಸಿ ಅಂಗಡಿಯೊಂದನ್ನು ಹರತಾಳ ಬೆಂಬಲಿಗರು ಮುಚ್ಚಿಸಿದರು. ಪ್ರತಿಭಟನ ಮೆರವಣಿಗೆಯ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಯಿತು. ರಸ್ತೆ ಬದಿಯಲ್ಲಿ ನಿಂತು ಗುಂಪು ಸೇರಿದ್ದ ಯುವಕರನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಮೆರವಣಿಗೆ ಮುಂದುವರಿದು ಕರಂದಕ್ಕಾಡ್‌ನ‌ಲ್ಲಿ ಸಮಾಪನಗೊಂಡಿತು.

ನೀಲೇಶ್ವರದಲ್ಲಿ ಬಿಜೆಪಿ ಕಾರ್ಯಾಲಯ ಹಾನಿಗೊಳಿಸಿದ ಘಟನೆ ನಡೆದಿದೆ. ಕಾರ್ಯಾಲಯಕ್ಕೆ ನುಗ್ಗಿದ ಗುಂಪೊಂದು ಕಲ್ಲೆಸೆದು, ಪೀಠೊಪಕರಣಗಳನ್ನು ಹಾನಿಗೈದು ಪರಾರಿಯಾಗಿದೆ.  ಕಾರ್ಯಾ ಲಯದಲ್ಲಿದ್ದ 10 ಸಾವಿರ ರೂ. ಅಪಹರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಹೊಸದುರ್ಗದ ಪೂಚಕ್ಕಾಡ್‌ನ‌ಲ್ಲಿ ವಿಹಿಂಪ ಮುಖಂಡ ಜಯ ಕುಮಾರ್‌ ಮನೆಯ ಮುಂದೆ ದುಷ್ಕರ್ಮಿಗಳು ಮೃತದೇಹದ ಮೇಲೆ ಇರಿಸಲು ಬಳಸುವ ಹೂಗುತ್ಛ ಇರಿಸಿದ್ದಾರೆ. ಇದು ಸಿಪಿಎಂ ಕಾರ್ಯಕರ್ತರ ಕೃತ್ಯವೆಂದು ವಿಹಿಂಪ ಆರೋಪಿಸಿದೆ.

ಕುಂಬಳೆ: ಇಬ್ಬರಿಗೆ ಗಂಭೀರ ಗಾಯ
ಕುಂಬಳೆ: ಬಾಯಾರಿನಲ್ಲಿ ಬೆಳಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಾಯಾರು ಕ್ಯಾಂಪ್ಕೋ ಕಾವಲುಗಾರ ಸುದೆಂಬಳದ ಹರೀಶ್‌ (30) ಮತ್ತು ಆವಳ ಮುಟ್ಟಾಜೆಯ ಫಿಟ್ಟರ್‌ ಸಂದೀಪ್‌ (22) ಅವರಿಗೆ 11 ಮಂದಿಯ ತಂಡ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಯಾರು ಮತ್ತು ಮಂಗಲ್ಪಾಡಿಯ ಬಂದ್ಯೋಡಿನಲ್ಲಿ ಗುಂಪು ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದಾರೆ. ಬಂದ್ಯೋಡಿನಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಬಳಿಕ ಸ್ಟನ್‌ ಗ್ರೆನೇಡ್‌ ಬಳಕೆ ಮಾಡಿದರು. ಮುಳಿಗದ್ದೆಯ ಜಕಾರಿಯಾ ಯಾನೆ ಜಕ್ಕಿ, ಆದಂ ನಾಯರ್ತಡ್ಕ, ಅದ್ರಾಮ ಪೊನ್ನೆಂಗಳ, ಅಬೂಬಕ್ಕರ್‌ ಬಾಯಾರುಪದವು, ಖಾದರ್‌ ಬಾಯಾರು ಬದಿಯಾರು, ಫಾರೂಕ್‌ ಕೊಳ್ಚಪ್ಪು, ಪುತ್ತು ಬೆರಿಪದವು, ನೌಶಾದ್‌ ಬಿಲ್ಲಾರ ಮೂಲೆ, ಮಹಮ್ಮದ್‌ ಜಿಯಾದ್‌ ಬಾಯಾರು, ಅಬೂಬಕ್ಕರ್‌ ಸಿದ್ಧಿಖ್‌ ಬಾಯಾರು ಮತ್ತು ಅನ್ಸಾಫ್‌ ಮುಟ್ಟಾಜೆ ಅವರ ತಂಡ ಹಲ್ಲೆ ನಡೆಸಿದೆ. ನಾರಾಯಣ ಮಂಗಲದಲ್ಲಿ ಮನೆಗಳಿಗೆ ಹಾನಿ
ಕುಂಬಳೆ ಬಳಿಯ ನಾರಾಯಣಮಂಗಲದಲ್ಲಿ ಗುರುವಾರ ಸಂಜೆ ತಂಡವೊಂದು ಮನೆಗಳಿಗೆ ಕಲ್ಲು ಎಸೆದಿದೆ.ಬಸ್‌ನಲ್ಲಿ ಮತ್ತು ಬೈಕಿನಲ್ಲಿ ಆಗಮಿಸಿದ ಯುವಕರ ತಂಡ ನಾರಾಯಣ ಮಂಗಲದ ರಸ್ತೆ ಪಕ್ಕ ಮನೆಗೆ ಕಲ್ಲು ಬಿಸಾಡಿದೆ. ಹೇಮಚಂದ್ರ ಎಂಬವರಿಗೆ ಗಾಯವಾಗಿದ್ದು ಕಾಸರಗೋಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

Advertisement

ರಸ್ತೆ ತಡೆಗೆ ಬೈಕ್‌ ಢಿಕ್ಕಿ: ಮೂವರಿಗೆ ಗಾಯ 
ರಸ್ತೆಗೆ ಅಡ್ಡವಿರಿಸಿದ ಕಲ್ಲು ಹಾಗೂ ಮರದ ತುಂಡಿಗೆ ಢಿಕ್ಕಿ ಹೊಡೆದು ಎರಡು ದ್ವಿಚಕ್ರ ವಾಹನಗಳು ಮಗುಚಿ ಬಿದ್ದು ದಂಪತಿ ಸಹಿತ ಮೂವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನೀರ್ಚಾಲು ಮತ್ತು ಅಂಗಡಿಪದವಿನಲ್ಲಿ ನಡೆದಿದೆ. ನೀರ್ಚಾಲಿನಲ್ಲಿ ಕನ್ನೆಪ್ಪಾಡಿ ನಿವಾಸಿ ಐತ್ತಪ್ಪ ನಾಯ್ಕ (50) ಮತ್ತು ಅವರ ಪತ್ನಿ ಸುಶೀಲಾ (45) ಗಾಯಗೊಂಡಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆಗೆ ಬೈಕ್‌ನಲ್ಲಿ ಕುಂಬಳೆ ಭಾಗಕ್ಕೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಲ್ಲುಗಳನ್ನಿರಿಸಲಾಗಿದ್ದು, ಅದಕ್ಕೆ ಢಿಕ್ಕಿ ಹೊಡೆದು ಬಿದ್ದಿದ್ದಾರೆ.

ಬಂಟ್ವಾಳ: ಸಿಪಿಎಂ ಕಚೇರಿಗೆ ಬೆಂಕಿ 
ಬಂಟ್ವಾಳ ಬೈಪಾಸ್‌ ಕಾಂಮ್ರೆಡ್‌ ದಿ| ಎ ಶಾಂತಾರಾಮ ಪೈ ಕಟ್ಟಡದ ಒಳನುಗ್ಗಿದ ಕಿಡಿಗೇಡಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಗುರುವಾರ ಬೆಳಗ್ಗೆ ಸಿಪಿಎಂ ಪಕ್ಷ ನೇತಾರ ಶೇಖರ್‌ ಬಾಗಿಲು ತೆಗೆಯುವಾಗ ಘಟನೆ ಬೆಳಕಿಗೆ ಬಂದಿತ್ತು.

ಪರಿಸ್ಥಿತಿ ಹತೋಟಿಯಲ್ಲಿ
ಅಯ್ಯಪ್ಪ ಭಕ್ತರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದರೂ ಸದ್ಯ ಕಾಸರಗೋಡಿನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಹಿಂಸೆಯಲ್ಲಿ ನಿರತರಾದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. ಹಲವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾತ್ರಿ ಗಸ್ತು ನಡೆಸಲಾಗುತ್ತಿದೆ.
ಡಾ| ಶ್ರೀನಿವಾಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next