ಚಿಕ್ಕಬಳ್ಳಾಪುರ: ಕಾನೂನು ಬಾಹಿರವಾಗಿ ನಿಷೇಧದ ನಡುವೆಯು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ತಂಡ ಜಿಲ್ಲಾ ಕೇಂದ್ರದ ಎಂ.ಜಿ. ರಸ್ತೆ, ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ದಾಳಿ ನೆಡಸಿ ಅಂಗಡಿ ಮುಂಗಟ್ಟು ಕಾಂಡಿಮೆಂಟ್ಸ್ ಸಾರ್ವಜನಿಕ ಸ್ಥಳಗಳ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ಹಾಗೂ ಕಾಯ್ದೆ ಕುರಿತು ಅರಿವು ಮೂಡಿಸಿದರು.
14 ಪ್ರಕರಣ ದಾಖಲು: ತಾಲೂಕು ಕೋಟ್ಪಾ-2003 ಕಾಯ್ದೆಯ ಉನ್ನತ ಮಟ್ಟದ ಅನುಷ್ಠಾನ ತಾಲೂಕು ಎಂದು ಘೋಷಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಕೋಟ್ಪಾ-2003 ರ ಅಡಿಯಲ್ಲಿ 14 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಯಿತು.
ನಾಮಫಲಕ ಹಾಕಿ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳನ್ನು ಧೂಮಪಾನ ನಿಷೇಧಿತ ಪ್ರದೇಶ ಎಂದು ಘೋಷಿಸಿ ಧೂಮಪಾನ ನಿಷೇಧದ ನಾಮಫಲಕವನ್ನು ಕಡ್ಡಾಯವಾಗಿ ಬಿತ್ತರಿಸಬೇಕು. ಶಿಕ್ಷಣ ಸಂಸ್ಥೆಗಳ ಆವರಣದ ನೂರು ಘಜದವರೆಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಸಂಪೂರ್ಣ ನಿಷೇಧಿಸಿ ಈ ಕುರಿತು ನಾಮಫಲಕ ವಿತರಿಸಬೇಕು.
ಜಾಹೀರಾತು ಪ್ರದರ್ಶನ ನಿಷೇಧ: 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅವರಿಗೆ ಮಾರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಕುರಿತು ನಾಮಫಲಕವನ್ನು ಮಾರಾಟ ಮಾಡುವ ಸ್ಥಳದಲ್ಲಿ ಬಿತ್ತರಿಸುವುದು ಕಡ್ಡಾಯ, ತಂಬಾಕು ಉತ್ಪನ್ನಗಳ ಕುರಿತು ಜಾಹೀರಾತು ಪ್ರದರ್ಶನ ನಿಷೇಧಿಸಿದೆ. ತಂಬಾಕು ಉತ್ಪನ್ನಗಳ ಮೇಲೆ ಶೇ.80 ರಷ್ಟು ಆರೋಗ್ಯ ಹಾನಿ ಎಚ್ಚರಿಕೆ ಚಿತ್ರ, ಟೋಲ್ ಫ್ರಿ ನಂಬರ್ ಮುದ್ರಿಸುವುದು ಕಡ್ಡಾಯ ತನಿಖಾ ಅಧಿಕಾರಿಗಳು ಅಂಗಡಿ ಮಳಿಗೆದಾರರಿಗೆ ಅರಿವು ಮೂಡಿಸಿದರು.
ವಿಶೇಷವಾಗಿ ಜೈ ಬೀಮ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರಿಗೆ, ವಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ ಗುಂಪು ಸಭೆ ಸೇರಿಸಿ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಕೋಟ್ಪಾ ತನಿಖಾ ದಳದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹರೀಶ್ ಜಿ. ಕ್ಷೇತ್ರ ಆರೋಗ್ಯ ಶಿಕ್ಷಾಣಾಧಿಕಾರಿ ಸುಧಾ, ಪೊಲೀಸ್ ಪೇದೆ ಕೃಷ್ಣಮೂರ್ತಿ, ಮಂಜುನಾಥ್, ದೇವರಾಜು ಉಪಸ್ಥಿತರಿದ್ದರು.