Advertisement

ಅರಣ್ಯ ರಕ್ಷಕರ ನೇಮಕದಲ್ಲಿ ಹೈ-ಕ ಮೀಸಲು ಉಲ್ಲಂಘನೆ

03:45 AM Jan 27, 2017 | Team Udayavani |

ಗಂಗಾವತಿ: ಕಳೆದ ಮಾರ್ಚ್‌ನಲ್ಲಿ ಅರಣ್ಯ ಇಲಾಖೆ 555 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ ವೇಳೆ ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ ಸಂವಿಧಾನದ ಕಲಂ 371(ಜೆ) ಅನ್ವಯ ನೀಡಿರುವ ಮೀಸಲು ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

Advertisement

ಕಳೆದ ವರ್ಷ ಮಾರ್ಚ್‌ನಲ್ಲಿ ಅರಣ್ಯ ಇಲಾಖೆ 555 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ ವೇಳೆ ಹೈ-ಕ ಭಾಗದ 7 ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ 80 ಹುದ್ದೆಗಳನ್ನು ಮೀಸಲಿರಿಸಲಾಗಿತ್ತು. ಎಲ್ಲರಂತೆ ಇಲ್ಲಿಯ ಅಭ್ಯರ್ಥಿಗಳೂ ದೈಹಿಕ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಂಡು ಉತ್ತಮ ಅಂಕ ಪಡೆದಿದ್ದರು.

ಇದೀಗ ನೇಮಕಾತಿ ಪ್ರಕ್ರಿಯೆ ಮುಗಿದು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಪಟ್ಟಿಯಲ್ಲಿ ಹೈ-ಕ ಭಾಗದ 7 ಜಿಲ್ಲೆಗಳ ಅಭ್ಯರ್ಥಿಗಳ ಹೆಸರಿಲ್ಲ.ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಹೇಳುವ ಕಾರಣವೇ ಬೇರೆ. ರಾಜ್ಯದ ವಿವಿಧೆಡೆ ಸೇವೆಯಲ್ಲಿರುವ ಹೈ-ಕ ಭಾಗದ ಅರಣ್ಯ ರಕ್ಷಕರನ್ನು ಈ ಭಾಗಕ್ಕೆ ವರ್ಗಾವಣೆ ಮಾಡುವ ಮೂಲಕ 371 (ಜೆ) ಮೀಸಲಾತಿ ಸರಿದೂಗಿಸಲಾಗುತ್ತಿದೆ ಎಂದು ನೆಪ ಹೇಳಲಾಗುತ್ತಿದೆ.

ಹೀಗೆ ಮಾಡಿದರೂ ಮೀಸಲು ನಿಯಮ ಉಲ್ಲಂಘನೆಯಾಗಲಿದೆ. 80 ಹುದ್ದೆಗಳಿಗೆ ಮೀಸಲಾತಿ ಅನ್ವಯ ಹಾಲಿ ನೌಕರರನ್ನು ವರ್ಗಾವಣೆಯಾದರೆ ಆಯ್ಕೆ ಪ್ರಾಧಿಕಾರ 475 ಹುದ್ದೆಗಳಿಗೆ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ ಹೈ-ಕ ಅಭ್ಯರ್ಥಿಗಳನ್ನು ಹೊರತು ಪಡಿಸಿ ಒಟ್ಟು 555 ಹುದ್ದೆಗಳಿಗೆ ನೇಮಕ ಮಾಡಿ ವೆಬ್‌ ಸೈಟ್‌ನಲ್ಲಿ ಪಟ್ಟಿ ಪ್ರಕಟಿಸಿ ಹೈ-ಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದೆ.

ಅರಣ್ಯ ಇಲಾಖೆ ರಕ್ಷಕ ಹುದ್ದೆ ಭರ್ತಿ ಮಾಡುವ ವೇಳೆ ಹೊರಡಿಸಿದ್ದ ಪ್ರಕಟಣೆಯಲ್ಲಿ 80 ಹುದ್ದೆಗಳನ್ನು ಹೈ-ಕ ಭಾಗಕ್ಕೆ
ಮೀಸಲಿರಿಸಲಾಗಿತ್ತು. ಈಗ ಪ್ರಕಟವಾಗಿರುವ ಆಯ್ಕೆಪಟ್ಟಿಯಲ್ಲಿ ಈ ಭಾಗದ ಒಬ್ಬ ಅಭ್ಯರ್ಥಿಯ ಹೆಸರೂ ಇಲ್ಲ. ಹೈ-ಕ ಭಾಗದ
ಮೀಸಲಾತಿ ವಂಚನೆ ಮಾಡಲಾಗಿದೆ. ಇದನ್ನು ಸರಿಪಡಿಸಬೇಕು.ಇಲ್ಲದಿದ್ದರೆ ಹೋರಾಟ ಅನಿವಾರ್ಯ.

  – ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ’

Advertisement

ಹೈ-ಕ ಭಾಗದ ಖಾಲಿ ಹುದ್ದೆಗಳ ನೇಮಕಾತಿ ಮತ್ತು ಉನ್ನತ ಶಿಕ್ಷಣ ಪ್ರವೇಶ ವೇಳೆ ಕಲಂ 371(ಜೆ) ನಿಯಮ
ಪಾಲನೆಯಾಗುತ್ತಿಲ್ಲ. ಕಾನೂನು ಮಾಡಿದರೆ ಸಾಲದು. ಅನುಷ್ಠಾನವೂ ಆಗಬೇಕು. ಹೈ-ಕ ಭಾಗದ ಶಾಸಕರು, ಸಚಿವರು ನಿರಾಸಕ್ತಿಯಿಂದ ಇಲ್ಲಿಯ ಹುದ್ದೆಗಳು ಅನ್ಯರ ಪಾಲಾಗುತ್ತಿವೆ. ಸಚಿವ ಎಚ್‌.ಕೆ.ಪಾಟೀಲ ಅಧ್ಯಕ್ಷತೆಯ ಕಲಂ 371(ಜೆ)ಅನುಷ್ಠಾನ ಸಮಿತಿ ಸಭೆ ಇದುವರೆಗೂ ನಡೆದಿಲ್ಲ.

  – ಡಾ| ರಜಾಕ್‌ ಉಸ್ತಾದ್‌, ಮುಖಂಡರು,ಹೈ-ಕ ಹೋರಾಟ ಸಮಿತಿ

– ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next