ಹುಣಸೂರು: ಜಾತಿ, ಧರ್ಮದ ಹೆಸರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣೆ ಎದುರಿಸುತ್ತಿದ್ದರೆ. ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಹಣ ಕೊಡುತ್ತೇನೆ, ಮತ ಕೊಡಿ ಎಂದು ಆಮಿಷವೊಡ್ಡುತ್ತಿದ್ದಾರೆ. ನೀತಿ ಸಂಹಿತೆ ಉಲ್ಲಂ ಸಿರುವ ಇವರ ವಿರುದ್ಧ ಚುನಾವಣೆ ಆಯೋಗ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಕಾಂಗ್ರೆಸ್ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಲಿಂಗಾಯಿತ ಸಮುದಾಯಕ್ಕೆ ಬಿಜೆಪಿಗೆ ಮತ ಚಲಾಯಿಸಲಿದ್ದಾರೆಂದು ಹೇಳುವ ಮೂಲಕ ಸಂವಿಧಾನದ ಆಶಯಗಳನ್ನು ಮುಖ್ಯಮಂತ್ರಿ ಉಲ್ಲಂಘಿಸಿದ್ದಾರೆ.
ಇದೇ ರೀತಿ ಎಂ.ಟಿ.ಬಿ.ನಾಗರಾಜ್ ಪ್ರತಿ ಮತಕ್ಕೆ 20 ಸಾವಿರ ನೀಡುತ್ತೇನೆಂದು ಬಹಿರಂಗ ಹೇಳಿಕೆ ನೀಡಿದ್ದರೂ ಚುನಾವಣಾ ಆಯೋಗ ಮೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿದೆ. ರಾಜ್ಯದಲ್ಲಿ ಚುನಾವಣಾ ಆಯೋಗ ಅಸ್ತಿತ್ವದಲ್ಲಿ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪಕ್ಷವು ದೂರು ಸಲ್ಲಿಸಿದ್ದು, ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಹಾಗೂ ಎಂ.ಟಿ.ಬಿ.ನಾಗರಾಜ್ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಐಟಿ ಸೆಲ್ ಜಿಲ್ಲಾ ಅಧ್ಯಕ್ಷ ಡೋನಾಲ್ಡ್, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಸಯ್ಯದ್ ಮೊಯುದ್ದೀನ್, ದಿನೇಶ್ ಕುಮಾರ್, ಗ್ರಾಪಂ ಸದಸ್ಯ ಸಂತೋಷ್‌ಕುಮಾರ್ ಇತರರಿದ್ದರು.