Advertisement
ನಾಡಹಬ್ಬ ದಸರೆ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ವಿಂಟೇಜ್ ಕಾರು ಪ್ರದರ್ಶನ ಎಲ್ಲರ ಕಣ್ಮನ ಸೆಳೆಯಿತು. ಮೋತಿಲಾಲ್ ನೆಹರೂ ಹಾಗೂ ಹಲವು ರಾಜಮಹಾರಾಜರು ಬಳಸಿದ ಆಕರ್ಷಕ ಕಾರುಗಳು ನಗರದ ರಸ್ತೆಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆದವು.
Related Articles
Advertisement
ಬಳಿಕ ನಗರದ ಲಲಿತಮಹಲ್ ಪ್ಯಾಲೆಸ್‌ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರುಗಳು ವಿಶ್ವವಿಖ್ಯಾತ ಅರಮನೆ ಆವರಣಕ್ಕೆ ತೆರಳಿತು. ಈ ವೇಳೆ ರಸ್ತೆಯುದ್ದಕ್ಕೂ ನಿಂತಿದ್ದ ಸಾರ್ವಜನಿಕರು ವಿಂಟೇಜ್ ಕಾರುಗಳನ್ನು ಕಂಡು ಖುಷಿಪಟ್ಟರು.
ಅರಮನೆಯಲ್ಲಿ ಪ್ರದರ್ಶನ: ಲಲಿತಮಹಲ್ ಪ್ಯಾಲೆಸ್‌ನಿಂದ ಹೊರಟ ವಿಂಟೇಜ್ ಕಾರುಗಳನ್ನು ಅರಮನೆ ಆವರಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿತ್ತು. ಸಂಜೆ ವೇಳೆ ಅರಮನೆ ವೀಕ್ಷಣೆಗೆಂದು ಆಗಮಿಸಿದ್ದ ಜನರು ಹಲವು ವರ್ಷಗಳ ಇತಿಹಾಸವಿರುವ ಹಳೆಯ ಕಾರುಗಳನ್ನು ಕಂಡು ಸಂಭ್ರಮಿಸಿದರು.
ಅಲ್ಲದೆ ಅವುಗಳ ಅಂದ-ಚೆಂದಕ್ಕೆ ಮನಸೋತ ಸಾರ್ವಜನಿಕರು, ಕಾರುಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡರು. ವಿಂಟೇಜ್ ಕಾರು ರ್ಯಾಲಿಯಲ್ಲಿ ಶ್ರೀಲಂಕಾದ 9 ಕಾರುಗಳು, ಇಂಗ್ಲೆಂಡ್‌ನ 1 ಕಾರು ಭಾಗವಹಿಸಿತ್ತು. ಅಲ್ಲದೆ ಗೋವಾ, ಲಕ್ನೋ, ಜೈಪುರದ ರಾಜಮನೆತನದವರು ವಿಂಟೇಜ್ ಕಾರುಗಳೊಂದಿಗೆ ಆಗಮಿಸುವ ಮೂಲಕ ಕಾರ್ ರ್ಯಾಲಿಗೆ ಮೆರಗು ನೀಡಿದರು.
ಮೋತಿಲಾಲ್ ನೆಹರೂ ಕಾರು: ವಿಂಟೇಜ್ ಕಾರ್ ರ್ಯಾಲಿಯಲ್ಲಿ ಒಟ್ಟು 50 ಕಾರುಗಳು ಭಾಗವಹಿಸಿದ್ದವು. ಈ ಪೈಕಿ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ತಂದೆ ಮೋತಿಲಾಲ್ ನೆಹರೂ ಬಳಸುತ್ತಿದ್ದ 1928 ಮಾಡೆಲ್‌ನ “ಲಾಂಚೆಸ್ಟರ್ ಸ್ಟ್ರೀಟ್-8′ ಕಾರು ಎಲ್ಲರ ಗಮನ ಸೆಳೆಯಿತು. ಮೋತಿಲಾಲ್ ನೆಹರೂ ಈ ಕಾರನ್ನು ಮದ್ರಾಸ್ ಗವರ್ನರ್ ಜನರಲ್‌ಗೆ ಮಾರಾಟ ಮಾಡಿದರು.
ಗವರ್ನರ್ ಜನರಲ್ ಕೆಲವು ವರ್ಷಗಳ ಕಾಲ ಬಳಕೆ ಮಾಡಿ ಕೈಗಾರಿಕೋದ್ಯಮಿಯೊಬ್ಬರಿಗೆ ಮಾರಾಟ ಮಾಡಿದರು. ಕೈಗಾರಿಕೋದ್ಯಮಿ ಪ್ರಸ್ತುತ “ಲಾಂಚೆಸ್ಟರ್ ಸ್ಟ್ರೀಟ್-8’ನ ಮಾಲಿಕರಾಗಿರುವ ಡಾ. ರವಿಪ್ರಕಾಶ್ ಸ್ನೇಹಿತನಿಗೆ ಮಾರಾಟ ಮಾಡಿದ್ದು, ರವಿ ಪ್ರಕಾಶ್ ತಮ್ಮ ಸ್ನೇಹಿತನಿಂದ 1996ರಲ್ಲಿ ಈ ಕಾರು ಖರೀದಿಸಿದರು.
ಇಂದು ಗಜಪಡೆಯೊಂದಿಗೆ ವಿಂಟೇಜ್ ಕಾರು: ದಸರಾ ಜಂಬೂಸವಾರಿಗೆ ತಾಲೀಮು ನಡೆಸುತ್ತಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯೊಂದಿಗೆ ಇಂದು ವಿಂಟೇಜ್ ಕಾರ್ ರ್ಯಾಲಿ ನಡೆಯಲಿದೆ.
ವಿಂಟೇಜ್ ಕಾರ್ ರ್ಯಾಲಿ ಹಿನ್ನೆಲೆಯಲ್ಲಿ ನಗರಕ್ಕೆ ತರಲಾಗಿರುವ ಕೆಲವು ವಿಂಟೇಜ್ ಕಾರುಗಳನ್ನು ದಸರಾ ಆನೆಗಳ ತಂಡದ ಜತೆಗೆ ಅಂಬಾವಿಲಾಸ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಮೂಲಕ ತೆರಳಲಿವೆ. ನಂತರ ಚಾಮುಂಡಿಬೆಟ್ಟಕ್ಕೆ ತೆರಳುವ ವಿಂಟೇಜ್ ಕಾರುಗಳು ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬೆಂಗಳೂರಿಗೆ ಹಿಂತಿರುಗಲಿವೆ.