Advertisement

ವಿನೋದ್‌ ಪ್ರಭಾಕರ್‌ ಮುಂದಿನ ಸಿಎಂ?

11:14 AM May 08, 2018 | |

ಇತ್ತೀಚೆಗಷ್ಟೇ ವಿನೋದ್‌ ಪ್ರಭಾಕರ್‌ ದೇಹವನ್ನು ಗಟ್ಟಿಗೊಳಿಸಿಕೊಂಡು, ಫೋಟೋ ಶೂಟ್‌ ಮಾಡಿಸಿ, ಮಾಧ್ಯಮ ಎದುರು ಆ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಆ ಫೋಟೋ ನೋಡಿದವರೆಲ್ಲರಿಗೂ ಅಚ್ಚರಿಯಾಗಿದ್ದಂತೂ ಸುಳ್ಳಲ್ಲ. ಅಷ್ಟರಮಟ್ಟಗೆ ವರ್ಕೌಟ್‌ ಮಾಡಿಕೊಂಡಿದ್ದ ವಿನೋದ್‌ ಪ್ರಭಾಕರ್‌, ಇಷ್ಟರಲ್ಲೇ ಒಂದು ಹೊಸ ಸುದ್ದಿ ಕೊಡ್ತೀನಿ ಅಂದಿದ್ದರು. ಆ ಹೊಸ ಸುದ್ದಿ ಮತ್ತೇನೂ ಇಲ್ಲ.

Advertisement

ಅವರೀಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಪುರಿ ಜಗನ್ನಾಥ್‌ ಶಿಷ್ಯ ರವಿಗೌಡ ಎನ್ನುವವರು ಇದೇ ಮೊದಲ ಸಲ ಕನ್ನಡ ಚಿತ್ರ ನಿರ್ದೇಶಿಸುತ್ತಿದ್ದಾರೆ. ತೆಲುಗು ತಂಡ ಕನ್ನಡ ಚಿತ್ರಕ್ಕೆ ಕೆಲಸ ಮಾಡುತ್ತಿದ್ದರೂ, ಇದು ಸ್ವಮೇಕ್‌ ಸಿನಿಮಾ. ಇನ್ನು, ಈ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿಲ್ಲ. ಆದರೆ, ಚಿತ್ರತಂಡ, “ಸಿಎಂ’ ಎಂಬ ಶೀರ್ಷಿಕೆ ಇಡಬೇಕು ಅಂದುಕೊಂಡಿದೆ. ಆದರೆ, ಈ ಶೀರ್ಷಿಕೆ ನಟ ಉಪೇಂದ್ರ ಅವರ ಬ್ಯಾನರ್‌ನಲ್ಲಿದೆ.

“ಸಿಎಂ’ ಅಂದರೆ, “ಕಾಮನ್‌ ಮ್ಯಾನ್‌’ ಎಂದರ್ಥ. ಒಂದು ವೇಳೆ “ಸಿಎಂ’ ಶೀರ್ಷಿಕೆ ವಿನೋದ್‌ ಪ್ರಭಾಕರ್‌ ಅವರ ಹೊಸ ಚಿತ್ರಕ್ಕೆ ಸಿಕ್ಕರೆ, ವಿನೋದ್‌ ಪ್ರಭಾಕರ್‌ ಮುಂದಿನ “ಸಿಎಂ’ ಆಗಬಹುದು. ಸದ್ಯಕ್ಕೆ ಶೀರ್ಷಿಕೆ ಸಿಕ್ಕಿಲ್ಲವಾದ್ದರಿಂದ ಪ್ರೊಡಕ್ಷನ್‌ ನಂಬರ್‌ ಒನ್‌ ಅಂತಿಟ್ಟು ಮುಹೂರ್ತ ನಡೆಸುವ ಯೋಚನೆ ಚಿತ್ರತಂಡದ್ದು. ಅಂದಹಾಗೆ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಆಗಿರುವ ಈ ಚಿತ್ರವನ್ನು ಬೆಂಗಳೂರು ಫಿಲ್ಮ್ಸ್ನ ಕುಮಾರ್‌ ಮತ್ತು ಚಕ್ರಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

ಮೇ 11 ರಂದು ದೊಡ್ಡ ಗಣಪತಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಮೇ 15ರಿಂದ ಹೈದರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಅಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ, ನಂತರ ಬೆಂಗಳೂರು, ಮಂಗಳೂರು, ಸಕಲೇಶಪುರ ಹಾಗು ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದೊಂದು ಪಕ್ಕಾ ಆ್ಯಕ್ಷನ್‌ ಚಿತ್ರ ಆಗಿರುವುದರಿಂದ ಚಿತ್ರಕ್ಕೆ ವಿನೋದ್‌ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ.

ಚಿತ್ರಕ್ಕೆ ಅಚ್ಚು ಎಂಬುವವರು ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಮೂರು ಹಾಡುಗಳಿರಲಿವೆ. ಮನೋಹರ್‌ ಜೋಶಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಬಲಾ ನಾಣಿ, ಕುರಿ ಪ್ರತಾಪ್‌, ವಿಜಯ್‌ ಚೆಂಡೂರ್‌ ಸೇರಿದಂತೆ ಹಲವು ನಟರು ಕಾಣಿಸಿಕೊಳ್ಳುತ್ತಿದ್ದಾರೆ. ಖಳನಟ ರವಿಶಂಕರ್‌ ಅವರಿಗೂ ಇಲ್ಲೊಂದು ಪ್ರಮುಖ ಪಾತ್ರವಿದ್ದು, ಅವರೂ ಇಲ್ಲಿ ನಟಿಸುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.