Advertisement

ಪ್ರಶಸ್ತಿ ಸುತ್ತಿನಿಂದ ಹೊರಬಿದ್ದ ವಿನೀಶ್‌ ಪೊಗಟ್‌

08:52 AM Sep 19, 2019 | sudhir |

ನೂರ್‌ ಸುಲ್ತಾನ್‌ (ಕಜಾಕ್‌ಸ್ಥಾನ): ಭಾರತದ ಸ್ಟಾರ್‌ ಕುಸ್ತಿಪಟು ವಿನೀಶ್‌ ಪೊಗಟ್‌ ಅವರು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದ್ದಾರೆ.

Advertisement

ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಪೊಗಟ್‌ ಅವರು ಹಾಲಿ ಚಾಂಪಿಯನ್‌ ಜಪಾನಿನ ಮಯು ಮುಕೈಡಾ ಅವರ ಕೈಯಲ್ಲಿ ಸುಲಭವಾಗಿ ಶರಣಾದರು. ಈ ಋತುವಿನಲ್ಲಿ ಪೊಗಟ್‌ ಜಪಾನಿನ ಎದುರಾಳಿಯೆದುರು ಸತತ ಎರಡನೇ ಹೋರಾಟದಲ್ಲಿ ಸೋಲು ಕಂಡಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಮಕೈಡಾ ಕೈಯಲ್ಲಿ ಪೊಗಟ್‌ ಚೀನದಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಸೋತಿದ್ದರು.

ಕಾಮನ್‌ವೆಲ್ತ್‌ ಮತ್ತು ಏಶ್ಯನ್‌ ಗೇಮ್ಸ್‌ನಲ್ಲಿ ಪ್ರಶಸ್ತಿ ಗೆದ್ದಿರುವ ವಿನೀಶ್‌ ಪೊಗಟ್‌ ಅವರು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಯಾವುದೇ ಪದಕ ಗೆದ್ದಿಲ್ಲ.

ಪ್ರಾಬಲ್ಯ ಮೆರೆದ ಮುಕೈಡಾ
53 ಕೆ.ಜಿ. ವಿಭಾಗದ ಕಠಿನ ಸ್ಪರ್ಧೆಯೊಂದರಲ್ಲಿ ವಿನೀಶ್‌ ಆರಂಭಿಕ ಸುತ್ತಿನಲ್ಲಿ ಪ್ರಾಬಲ್ಯ ಮೆರೆದಿದ್ದರು. ರಿಯೋ ಒಲಿಂಪಿಕ್ಸ್‌ ಕಂಚು ವಿಜೇತೆ ಸೋಫಿಯಾ ಮ್ಯಾಟ್ಸನ್‌ ಅವರನ್ನು 13-0 ಅಂಕಗಳಿಂದ ಮಣಿಸಿ ಶುಭಾರಂಭ ಮಾಡಿದ್ದರು. ಆದರೆ ಭಾರೀ ನಿರೀಕ್ಷೆಯ ವಿಶ್ವದ ಎರಡನೇ ರ್‍ಯಾಂಕಿನ ಸ್ಪರ್ಧಿ ಮುಕೈಡಾ ವಿರುದ್ಧ ಪೊಗಟ್‌ ಸಂಪೂರ್ಣ ಶರಣಾದರು. ಮೊದಲ ನಿಮಿಷದಲ್ಲಿ ಯಾವುದೇ ಅಂಕ ದಾಖಲಾಗಿಲ್ಲ. ಆದರೆ ಬಳಿಕ ಮುಕೈಡಾ ಆಕ್ರಮಣಕ್ಕೆ ಇಳಿದು ಅಂಕ ಏರಿಸುತ್ತ ಹೋದರು. 7-0 ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆದರು. ಆಬಳಿಕ ಅವರು ಅಲುಗಾಡಿಸದ ಬಂಡೆಯಂತೆ ರಕ್ಷಣಾತ್ಮಕವಾಗಿ ಆಡಿ ಹೋರಾಟವನ್ನು ಗೆದ್ದರು.

ಭರ್ಜರಿ ಗೆಲುವಿನೊಂದಿಗೆ ಮುಕೈಡಾ ಸೆಮಿಫೈನಲ್‌ ತಲುಪಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ವಿನೀಶ್‌ ಪದಕ ಗೆಲ್ಲುವ ಮತ್ತು ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಗಳಿಸುವ ಅವಕಾಶವೊಂದನ್ನು ಪಡೆಯಲಿದ್ದಾರೆ.

Advertisement

ಇನ್ನೊಂದು ಒಲಿಂಪಿಕ್‌ ಅರ್ಹತಾ ವಿಭಾಗದಲ್ಲಿ (50 ಕೆ.ಜಿ.) ಸೀಮಾ ಬಿಸ್ಲಾ ಅವರು ತನ್ನ ಪ್ರೀ-ಕ್ವಾರ್ಟರ್‌ಫೈನ್‌ ಹೋರಾಟದಲ್ಲಿ ಮೂರು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಮರಯಾ ಸ್ಟಾಡ್ನಿಕ್‌ ಕೈಯಲ್ಲಿ 2-9 ಅಂಕಗಳಿಂದ ಸೋತಿದ್ದಾರೆ. ಅಜರ್‌ಬೈಜಾನಿಯ ಸ್ಟಾಡ್ನಿಕ್‌ ಸೆಮಿಫೈನಲ್‌ ತಲುಪಿದ್ದ ರಿಂದ ಸೀಮಾ ಅವರ ಸ್ಪರ್ಧೆ ಇನ್ನೂ ಮುಗಿದಿಲ್ಲ.

ಕಂಚಿನ ಪದಕಕ್ಕಾಗಿ ಪ್ರಯತ್ನ
ವಿನೀಶ್‌ ಪೊಗಟ್‌ ಅವರನ್ನು ಮಯು ಮುಕೈಡಾ ಪ್ರಶಸ್ತಿ ಸುತ್ತಿನಿಂದ ಉರುಳಿಸಿರಬಹುದು. ಆದರೆ ಭಾರತದ ಭರವಸೆಯ ಕುಸ್ತಿಪಟು ಇದೀಗ ಕಂಚಿನ ಪದಕ ಗೆಲ್ಲಲು ಹೋರಾಡಲಿದ್ದಾರೆ.

ಮಯು ಮುಕೈಡಾ ಅವರು ಫೈನಲ್‌ ಹಂತಕ್ಕೇರಿದ ಕಾರಣ ಪೊಗಟ್‌ ಅವರು ಪದಕ ಬೇಟೆಯಲ್ಲಿ ಮತ್ತು ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಗಳಿಸುವ ಅವಕಾಶ ಪಡೆದಿದ್ದಾರೆ.

ವಿನೀಶ್‌ ಇನ್ನು ರೆಪೆಚೇಜ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ಅವರು ಮೂವರು ಕುಸ್ತಿಪಟುಗಳನ್ನು ಉರುಳಿಸಿದರೆ ಚೊಚ್ಚಲ ಬಾರಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲಿದ್ದಾರೆ. ರೆಪೆಚೇಜ್‌ ವಿಭಾಗದ ಮೂರು ಸ್ಪರ್ಧೆಗಳಲ್ಲಿ ವಿನೀಶ್‌ ಅವರು ಉಕ್ರೈನಿನ ಯೂಲಿಯಾ ಖವಾಲ್ಡಿಝಿ ಬ್ಲಿಹಿನ್ಯಾ, ವಿಶ್ವದ ನಂಬರ್‌ ವನ್‌ ಸಾರಾ ಆ್ಯನ್‌ ಹಿಲ್ಡರ್‌ಬ್ರ್ಯಾಂಡ್‌¤ ಹಾಗೂ ಮತ್ತೆ ಗ್ರೀಸ್‌ನ ಮರಿಯಾ ಪ್ರಿವೊಲರಕಿ ಅವರ ಜತೆ ಹೋರಾಡಿ ಗೆಲ್ಲಬೇಕಾಗಿದೆ.

ಜಪಾನ್‌ ಕುಸ್ತಿಯ ಶಕ್ತಿಕೇಂದ್ರವಾಗಿದೆ. ಅಲ್ಲಿನ ಕುಸ್ತಿಪಟುಗಳನ್ನು ಎದುರಿಸಿ ಮೇಲುಗೈ ಸಾಧಿಸಲು ಕೆಲವು ಸಮಯ ತಗಲುತ್ತದೆ. ಇಲ್ಲಿ ತಂತ್ರಗಾರಿಕೆ, ನಡೆ ಮತ್ತು ಎಚ್ಚರಿಕೆಯಿಂದ ಆಡಿ ಅಂಕ ಗಳಿಸಲು ಪ್ರಯತ್ನಿಸಬೇಕಾಗಿದೆ. ನಾನು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಯಶಸ್ವಿಯಾಗಲಿಲ್ಲ.

– ವಿನೀಶ್‌ ಪೊಗಟ್‌

Advertisement

Udayavani is now on Telegram. Click here to join our channel and stay updated with the latest news.

Next