ನವದೆಹಲಿ: ರಾಮಜನ್ಮಭೂಮಿ ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ತಾರ್ಕಿಕ ಅಂತ್ಯ ನೀಡಿದೆ. ವಿವಾದಿತ 2.77 ಎಕರೆ ಜಾಗ ಹಿಂದೂಗಳಿಗೆ ಸೇರಿದ್ದು ಎಂಬ ಐತಿಹಾಸಿಕ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ ಪಂಚ ಸದಸ್ಯ ಪೀಠ ಒಮ್ಮತದಿಂದ ಹೇಳಿದೆ.
ರಾಮಮಂದಿರ ವಿಚಾರವನ್ನು ದೇಶವ್ಯಾಪಿಗೊಳಿಸಿದವರಲ್ಲಿ ಮತ್ತು ಈ ಹೋರಾಟದ ಹಿಂದೆ ತಮ್ಮನ್ನು ತೊಡಗಿಸಿಕೊಂಡಿದ್ದ ಪ್ರಮುಖರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಮತ್ತು ಮಾಜೀ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರೂ ಸಹ ಒಬ್ಬರು. ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ ಹಿಂದೂಗಳ ಸ್ವತ್ತು ಎಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು.
ಇದೀಗ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲೂ ಅದೇ ಅಂಶವನ್ನು ಉಲ್ಲೇಖಿಸಿರುವುದು ಗಮನಾರ್ಹ. ಇಂದಿನ ಸುಪ್ರೀಂ ತೀರ್ಪಿನ ಕುರಿತಾಗಿ ಎಲ್.ಕೆ.ಅಡ್ವಾಣಿ ಅವರು ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. 1980ರ ಕಾಲಘಟ್ಟದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರು ರಾಮಮಂದಿರವನ್ನು ಒಂದು ದೇಶವ್ಯಾಪಿ ಚಳವಳಿಯನ್ನಾಗಿ ರೂಪಿಸಿದ್ದರು.
‘ಇಂದಿನ ಈ ತೀರ್ಪಿನಿಂದ ನನಗೆ ಅತೀವ ಸಂತೋಷವಾಗಿದೆ ಮತ್ತು ಸುಪ್ರೀಂ ಕೋರ್ಟ್ ನಮ್ಮ ನಿಲುವನ್ನೇ ಎತ್ತಿಹಿಡಿದಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ’ ಎಂದು ಅಡ್ವಾಣಿ ಅವರು ಸುಪ್ರೀಂ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.
‘ಸುಪ್ರೀಂ ಕೋರ್ಟ್ ತನ್ನ ಒಮ್ಮತದ ತೀರ್ಪನ್ನು ನೀಡುವ ಮೂಲಕ ರಾಮ ಜನ್ಮಭೂಮಿಯಲ್ಲೇ ಶ್ರೀ ರಾಮಚಂದ್ರನಿಗೆ ಭವ್ಯ ಮಂದಿರವೊಂದನ್ನು ಕಟ್ಟಬೇಕೆಂಬ ನಮ್ಮೆಲ್ಲರ ಬಯಕೆಗೆ ಹಾದಿ ಸುಗಮ ಮಾಡಿಕೊಟ್ಟಿದೆ’ ಎಂದು ಬಿಜೆಪಿಯ ಭೀಷ್ಮ ಸಂತಸದಿಂದ ನುಡಿದರು.