Advertisement

ವಿನಾಯಕ@ ಹೋಂ ಡೆಲಿವರಿ!

03:32 PM Sep 09, 2021 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಭಕ್ತರು ದೇವರ ಬಳಿಗೆ ಹೋಗುತ್ತಾರೆ. ಆದರೆ ಈ ಬಾರಿ ಚೌತಿಯಲ್ಲಿ ಸ್ವತಃ ದೇವರೇ ಭಕ್ತರ ಮನೆ ಬಾಗಿಲಿಗೆ ಬರಲಿದ್ದಾನೆ. ಇದು ತಂತ್ರಜ್ಞಾನದ ಚಮತ್ಕಾರ!

Advertisement

ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ… ನಿಮ್ಮಬೆರಳತುದಿಯಿಂದ ಮೊಬೈಲ್‌ನಲ್ಲಿ ನಿಮಗಿಷ್ಟವಾದ ಮುದ್ದು ಗಣಪನನ್ನು ಬುಕ್ಕಿಂಗ್‌ ಮಾಡಿದರೆ ಸಾಕು. ಆನ್‌ಲೈನ್‌ ಗಣೇಶ ಮೂರ್ತಿ ಮಾರಾಟಕ್ಕೆ ಅಮೇಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೊಡ್ಡಕಂಪನಿಗಳು ಮಾತ್ರವಲ್ಲದೆ ಸ್ಥಳೀಯ ಗಣೇಶ ಮಾರಾಟಗಾರರು, ಕಲಾವಿದರುಕೂಡಾ ವೇದಿಕೆಕಲ್ಪಿಸಿದ್ದಾರೆ.

ಕೋವಿಡ್‌ ಸೋಂಕು ಹಿನ್ನೆಲೆ ಗಣೇಶ ಹಬ್ಬಕ್ಕೆ ಸರ್ಕಾರ ಕಳೆದ ವರ್ಷ ಮತ್ತು ಈ ಬಾರಿ ಸಾಕಷ್ಟು ನಿಯಮಗಳನ್ನು ವಿಧಿಸಿದೆ. ಜತೆಗೆ ಜನರಲ್ಲಿಯೂ
ಸಾರ್ವಜನಿಕ ಸ್ಥಳದಲ್ಲಿ ಸುಮಾರು ದಿನಗಳಿಂದ ಇಟ್ಟಿರುವ ಗಣೇಶ ಮೂರ್ತಿ ಖರೀದಿಗೆ, ಮಾರುಕಟ್ಟೆ, ವ್ಯಾಪಾರ ಮಳಿಗೆಗಳ ಭೇಟಿಗೆ ಹಿಂದೇಟು
ಹಾಕುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ಈ ಹಿಂದಿನ ವರ್ಷಗಳಲ್ಲಿ ಮುಂಬೈ, ದೆಹಲಿಗೆ ಸೀಮಿತವಾಗಿದ್ದ ಆನ್‌ಲೈನ್‌ ಗಣೇಶ ಮೂರ್ತಿ ಖರೀದಿ ಬೆಂಗಳೂರಿನಲ್ಲಿಯೂ ಮುನ್ನೆಲೆಗೆ ಬಂದಿದೆ. ಇನ್ನೊಂದೆಡೆ ಕಲಾವಿದರುಗಳು ಮತ್ತು ವ್ಯಾಪಾರಿಗಳು ತಮ್ಮ ಹಳೆಯ ಗ್ರಾಹಕರಿಗಾಗಿಯೇ ಸ್ವತಂ ತಾವೇ ವಾಟ್ಸ್‌ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿಕೊಂಡು ಮನೆಗೆ ಗಣೇಶ ಮೂರ್ತಿಯನ್ನು ತಲುಪಿಸುತ್ತಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆ ಯುಜಿ ಚಾಹಲ್ ಆಯ್ಕೆ ಯಾಕಿಲ್ಲ: ಕಾರಣ ಹೇಳಿದ ಆಯ್ಕೆ ಸಮಿತಿ ಮುಖ್ಯಸ್ಥ

Advertisement

ಕಳೆದ ತಿಂಗಳಿಂದಲೇ ಅಮೇಜಾನ್‌, ಫ್ಲಿಪ್‌ಕಾರ್ಟ್‌, ಮೈತ್ರಾ, ಸ್ನ್ಯಾಪ್‌ಡೀಲ್‌, ಪೂಜಾ ಆ್ಯಂಡ್‌ ಪೂಜಾ, ಮೈ ಪೂಜಾ ಬಾಕ್ಸ್‌ ಸೇರಿದಂತೆ ದೊಡ್ಡಮಟ್ಟದ ಆನ್‌ಲೈನ್‌ ಮಾರುಕಟ್ಟೆಯಲ್ಲಿಯೂ ಮಾರಾಟ ಆರಂಭವಾಗಿದೆ.

ಈಗಾಗಲೇ ಹಲವರು ಮನೆಗೆ ಆನ್‌ಲೈನ್‌ ಗಣೇಶ ಮೂರ್ತಿ ತಲುಪಿದೆ. ಇನ್ನುಕೆಲವರು ಹಬ್ಬಕ್ಕೆ ಒಂದು ದಿನ ಪೂರ್ವದಲ್ಲಿ ತಲುಪುವಂತೆ ಬುಕ್ಕಿಂಗ್‌ ಮಾಡಿದ್ದಾರೆ. ಕೆಲ ಕಲಾವಿದರ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಗ್ರೂಪ್‌ ಗಳು ಮೂಲಕ ಮಾರಾಟಕ್ಕೆ ಮುಂದಾಗಿದ್ದಾರೆ.

ಪರಿಸರ ಸ್ನೇಹಿ ಆದ್ಯತೆ, ಸೀಡ್‌ ಬಾಲ್‌, ಸ್ಯಾನಿಟೈಸರ್‌ ಆಕರ್ಷಣೆ: ಆನ್‌ಲೈನ್‌ನಲ್ಲಿ ಹೆಚ್ಚು ಮಣ್ಣಿನ, ಪರಿಸರ ಸ್ನೇಹಿ ಗಣೇಶ ಮಾರಾಟ ಹೆಚ್ಚಿದೆ. ಗಿಡದ ಬೀಜಗಳನ್ನು ಹೊಂದಿರುವ ಗಣೇಶ (ಸೀಡ್‌ ಬಾಲ್‌), ಮನೆಯಲ್ಲಿರುವ ಗಿಡ ಅಥವಾ ಕೈತೋಟಕ್ಕೆ ಗೊಬ್ಬರವಾಗುವಂತಹ ಸಾಮಗ್ರಿಗಳಿಂದ ಮಾಡಿದ ಮೂರ್ತಿಗಳು ಇವೆ. ಜತೆಗೆ ಪೂಜೆಗೆ ಬೇಕಾದ ಸಾಮಗ್ರಿಗಳ ಗುತ್ಛ, ಸಿಹಿ ತಿನಿಸು ನೀಡಲಾಗುತ್ತಿದೆ.

ಕೆಲ ಕಂಪನಿಗಳು ಮೂರ್ತಿ ಜತೆಗೆ ಸ್ನಾನಿಟೈಸರ್‌ ಬಾಟಲಿಯನ್ನು ನೀಡುತ್ತಿವೆ. ಪಾರ್ಸಲ್‌ ಬಾಕ್ಸ್‌ ತೆರೆಯುವ ಮುಂಚೆ ಅಥವಾ ಮೂರ್ತಿ, ಇತರೆ
ಸಾಮಗ್ರಿಗಳ ಮೇಲೆ ಸಿಂಪಡಿಸಲು, ಪೂಜಾ ಸಂದರ್ಭದಲ್ಲಿ ಮನೆಗೆ ಜನ ಬಂದರೆ ಬಳಸಲು ನೀಡಲಾಗುತ್ತಿದೆ. ಕನಿಷ್ಠ 10 ಇಂಚಿನ ಗಣೇಶ ಮೂರ್ತಿಯಿಂದ ಒಂದು, ಒಂದೂವರೆ ಅಡಿ ಎತ್ತರದ ಮೂರ್ತಿಗಳು ಲಭ್ಯವಿವೆ. ಇನ್ನು ಕನಿಷ್ಠ 99 ರೂ. ನಿಂದ ಗರಿಷ್ಠ 10 ಸಾವಿರ ರೂ.ವರೆಗೂ ದರವಿದೆ. ಹಬ್ಬದಿನ ಹತ್ತಿರ ಬಂದಂತೆ ರಿಯಾಯಿತಿ ಹೆಚ್ಚಿಸಲಾಗುತ್ತಿದೆ.

ಬಾಡಿಗೆಗೂಸಿಗಲಿದ್ದಾನೆ ಗಣೇಶ
ಪಿಒಪಿ ಮತ್ತು ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಬಾಡಿಗೆ ನೀಡಲಾಗುತ್ತಿದೆ. ಪರಿಸರ ಹಾನಿ ಹಿನ್ನೆಲೆ ಸರ್ಕಾರ ಇಂತಹ ಮೂರ್ತಿಗಳನ್ನು ನಿಷೇಧಿಸಿರುವ ಹಿನ್ನೆಲೆ ಈ ರೀತಿಯ ಮಾರುಕಟ್ಟೆಗೆ ವ್ಯಾಪಾರಿಗಳು ಮೊರೆ ಹೋಗಿದ್ದಾರೆ. ನಗರದ ಆರ್‌.ವಿ. ರಸ್ತೆಯ ವಿನಾಯಕ ಆ್ಯಂಡ್‌ ಕೋ ಸಂಸ್ಥೆಯಲ್ಲಿ ಬಾಡಿಗೆ ಗಣೇಶ ಲಭ್ಯವಿದೆ. ಶೇ.75ರಷ್ಟು ಹಣವನ್ನು ಗ್ರಾಹಕರಿಂದ ಪಡೆದು ಮೂರ್ತಿ ಕೊಡಲಾಗುವುದು. ಬಳಿಕ ಹಬ್ಬ ಆಚರಿಸಿ ಮೂರ್ತಿಯನ್ನು ವಾಪಸ್‌ ತಂದುಕೊಟ್ಟಾಗ ಪಡೆದಿದ್ದ ಹಣದಲ್ಲಿ ಅರ್ಧದಷ್ಟು ಹಣವನ್ನು ಹಿಂದಿರುಗಿಸಲಾಗುವುದು. ಮೂರ್ತಿಗಳನ್ನು ತೆಗೆದು ಕೊಂಡು ಹೋದವರು ತಮ್ಮ ಸಂಪ್ರದಾಯದಂತೆ ಅಲಂಕರಿಸಿ, ಪೂಜಿಸಬಹುದು. ಸಾಂಪ್ರದಾಯಿಕ ಪೂಜೆ, ಮೂರ್ತಿ ವಿಸರ್ಜನೆಗಾಗಿ ಪಿಒಪಿ ಮೂರ್ತಿಯ ಜತೆಗೆ ಗ್ರಾಹಕರಿಗೆ ಒಂದು ಪುಟ್ಟದಾದ ಮಣ್ಣಿನ ಗಣಪ ನೀಡಲಾಗುವುದು ಎಂದು ಸಂಸ್ಥೆ ಮಾಲೀಕ ಬಎಂ.ಶ್ರೀನಿವಾಸ್‌ ತಿಳಿಸಿದರು.

ಕೋವಿಡ್‌ ಹಿನ್ನೆಲೆ ಗಣೇಶನಿಗೆ ಆನ್‌ಲೈನ್‌ ವಿಶೇಷ ಪೂಜೆ
ಸಿಲಿಕಾನ್‌ ಸಿಟಿಯಲ್ಲಿ ಈಗಾಗಲೇ ಆನ್‌ಲೈನ್‌ ಪೂಜೆ ಚಾಲ್ತಿಯಲ್ಲಿದೆ. ಸದ್ಯ ಗಣೇಶ ಹಬ್ಬದ ಹಿನ್ನೆಲೆ ವಿವಿಧ ವೆಬ್‌ಸೈಟ್‌ಗಳು ವಿಶೇಷ
ರಿಯಾಯಿತಿಯೊಂದಿಗೆ ಗಣೇಶ ಮೂರ್ತಿ ಪೂಜೆಯನ್ನು ಆರಂಭಿಸಿವೆ. ಇದಕ್ಕಾಗಿ 999 ರೂ.ನಿಂದ 4999 ರೂ. ವರೆಗೂ ದರ ನಿಗದಿ ಪಡಿಸಿವೆ. ಇತ್ತ ಭಕ್ತಾದಿಗಳುಕೂಡಾ ಕೋವಿಡ್‌ ಸೋಂಕಿನ ಭಯದಿಂದ ಆನ್‌ಲೈನ್‌ ಪೂಜೆಗೆ ಮೊರೆ ಹೋಗಿದ್ದಾರೆ. ಮನೆಯಲ್ಲಿಯಾರಾದರೂ ಕ್ವಾರಂಟೈನ್‌ ಇದ್ದವರು ಪ್ರತಿ ವರ್ಷ ಸಂಪ್ರದಾಯದಂತೆ ಹಬ್ಬ ಆಚರಿಸಲು ಆನ್‌ಲೈನ್‌ ಗಣೇಶ ಖರೀದಿ ಅಥವಾ ಆನ್‌ ಪೂಜೆಗೆ ಆದ್ಯತೆ ನೀಡುತ್ತಿದ್ದಾರೆ.

ಕಳೆದ ವರ್ಷ ಬೌನ್ಸ್‌ ಜತೆ ಒಪ್ಪಂದ ಮಾಡಿಕೊಂಡು ಮನೆ ಬಾಗಿಲಿಗೆ ಗಣೇಶ ಡೆಲಿವರಿ ನೀಡಲಾಗಿತ್ತು. 400ಕ್ಕೂ ಹೆಚ್ಚು ಮೂರ್ತಿಗಳ ಆರ್ಡರ್‌ ಬಂದಿತ್ತು. ಈ ಬಾರಿಯೂ ಹೆಚ್ಚಿನ ನಿರೀಕ್ಷೆ ಇದೆ. ಸೋಂಕಿನ ಹಿನ್ನೆಲೆ ಗ್ರಾಹಕರುಕೂಡಾ ಹೆಚ್ಚು ಆನ್‌ಲೈನ್‌ ಬುಕ್ಕಿಂಗ್‌ಗೆ ಆದ್ಯತೆ ನೀಡಿದ್ದಾರೆ.
– ಶಿವು, ಪರಿಸರ ಸ್ನೇಹಿ ಗಣೇಶ ಕಲಾವಿದರು

ಆನ್‌ಲೈನ್‌ನಲ್ಲಿಕಡಿಮೆ ಬೆಲೆಗೆ ಆಕರ್ಷಕ ಮೂರ್ತಿಗಳು ಲಭ್ಯವಿದ್ದು, ಮನೆ ಬಾಗಿಲಿಗೆ ತಂದುಕೊಡುತ್ತಾರೆ. ಈಗಾಗಲೇ ಬುಕ್ಕಿಂಗ್‌ ಮಾಡಿದ್ದು,
ಗುರುವಾರ ಸಂಜೆ ಆಗಮಿಸಲಿದೆ.
– ದಿಲೀಪ್‌ ಕುಮಾರ್‌,
ಬಿಟಿಎಂ ಬಡಾವಣೆ ನಿವಾಸಿ

– ಜಯಪ್ರಕಾಶ್‌ ಬಿರಾದಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next