Advertisement

ವಿನಯ ಸಾಮರಸ್ಯ ಯೋಜನೆಗೆ ಡಿಸೆಂಬರ್ ನಲ್ಲಿ ಚಾಲನೆ: ಕೋಟ ಶ್ರೀನಿವಾಸ ಪೂಜಾರಿ

10:01 PM Nov 24, 2022 | Team Udayavani |

ಬೆಂಗಳೂರು: ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಲಾಗಿರುವ ವಿನಯ ಸಾಮರಸ್ಯ ವಿನೂತನ ಯೋಜನೆಯ ಉದ್ಘಾಟನೆ ಹಾಗೂ ಬೃಹತ್ ಸಮಾವೇಶವನ್ನು ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ವಿನಯ ಸಾಮರಸ್ಯ ಯೋಜನೆಗೆ ಚಾಲನೆ ನೀಡುವ ಸಂಬಂಧ ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಿದರು.

ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನೂತನ ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಬೇಕಿದ್ದು ಬರುವ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು ಎಂದರು.

ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲೆ ಸ್ಥಳ ಹಾಗೂ ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದರು.

Advertisement

ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದ್ದು ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೂ ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಇಲಾಖೆ ಸಲಹೆಗಾರ ಇ.ವೆಂಕಟಯ್ಯ, ಇಲಾಖೆ ಆಯುಕ್ತ ಡಾ.ಕೆ.ರಾಕೇಶಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಉದಯಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

2021 ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಬಾಲಕ ವಿನಯ್ ಮಾರುತಿ ದೇವಸ್ಥಾನ ಪ್ರವೇಶಿಸಿದ್ದರಿಂದ ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲಾಡಳಿತ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಗ್ರಾಮಕ್ಕೆ ಭೇಟಿ ನೀಡಿ ಬಾಲಕನನ್ನು ಶೈಕ್ಷಣಿಕವಾಗಿ ದತ್ತು ಪಡೆದಿದ್ದು,ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿನಯನ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ವಿನಯ ಸಾಮರಸ್ಯ ಯೋಜನೆಯನ್ನು ಸರ್ಕಾರ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next