ಬೆಂಗಳೂರು: ಟೀಂ ಇಂಡಿಯಾವನ್ನು ಮೂರು ಮಾದರಿ ಕ್ರಿಕೆಟ್ ನಲ್ಲಿ ಪ್ರತಿನಿಧಿಸಿದ್ದ ವೇಗಿ, ಕರ್ನಾಟಕ ತಂಡದ ಮಾಜಿ ನಾಯಕ, ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ಇಂದು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ವಿನಯ್ ಕುಮಾರ್ ಭಾರತ ತಂಡದ ಪರ ಒಂದು ಟೆಸ್ಟ್, 31 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿನಯ್ ಒಟ್ಟು 49 ವಿಕೆಟ್ ಕಬಳಿಸಿದ್ದಾರೆ.
2004ರಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್ ಆರಂಭಿಸಿದ ರಂಗನಾಥ್ ವಿನಯ್ ಕುಮಾರ್ ತಮ್ಮ ವೇಗ ಮತ್ತು ಸ್ಥಿರ ಪ್ರದರ್ಶನದಿಂದ ಬಹುಬೇಗನೇ ಉತ್ತಮ ಸಾಧನೆ ಮಾಡಿದರು. 2007-08 ರಣಜಿ ಕೂಟದಲ್ಲಿ 40 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. 2008ರ ಮೊದಲ ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡಿದ್ದರು.
2010ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ವಿನಯ್ ಕುಮಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ತಮ್ಮ ವೃತ್ತಿ ಜೀವನದ ಏಕೈಕ ಟೆಸ್ಟ್ ಪಂದ್ಯವನ್ನು 2012ರಲ್ಲಿ ಆಸೀಸ್ ವಿರುದ್ಧ ಆಡಿದ್ದರು.
2013-14 ಮತ್ತು 2014-15ರಲ್ಲಿ ವಿನಯ್ ಸಾರಥ್ಯದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಿತ್ತು. 2019ರಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ತಂಡವನ್ನು ತ್ಯಜಿಸಿ ಪಾಂಡಿಚೇರಿ ತಂಡದ ಪರ ವಿನಯ್ ಆಡಿದ್ದರು. ಆ ರಣಜಿ ಸೀಸನ್ ನಲ್ಲಿ 9 ಪಂದ್ಯದಿಂದ ವಿನಯ್ 45 ವಿಕೆಟ್ ಕಬಳಿಸಿದ್ದಾರೆ.