Advertisement

ವಿನಯ್‌ ಕುಮಾರ್‌, ಯೂಸುಫ್ ಕ್ರಿಕೆಟ್‌ ವಿದಾಯ

10:38 PM Feb 26, 2021 | Team Udayavani |

ಬೆಂಗಳೂರು: ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಯಶಸ್ವಿ ಪೇಸ್‌ ಬೌಲರ್‌, “ದಾವಣಗೆರೆ ಎಕ್ಸ್‌ಪ್ರೆಸ್‌’ ಖ್ಯಾತಿಯ ಆರ್‌. ವಿನಯ್‌ ಕುಮಾರ್‌ ಮತ್ತು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿದ್ದ ಯೂಸುಫ್ ಪಠಾಣ್‌ ಶುಕ್ರವಾರ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿದರು.

Advertisement

“ಕಳೆದ 25 ವರ್ಷಗಳಿಂದ ಕ್ರಿಕೆಟ್‌ ಬದುಕಿನ ಸುದೀರ್ಘ‌ ಸಂಚಾರ ನಡೆಸುತ್ತ, ವಿವಿಧ ನಿಲ್ದಾಣಗಳನ್ನು ಹಾದುಹೋದ ದಾವಣಗೆರೆ ಎಕ್ಸ್‌ಪ್ರೆಸ್‌ ಇಂದು “ರಿಟೈರ್‌ವೆುಂಟ್‌’ ಎಂಬ ಕೊನೆಯ ನಿಲ್ದಾಣವನ್ನು ತಲುಪಿದೆ. ಸಾಕಷ್ಟು ಸಮ್ಮಿಶ್ರ ಭಾವನೆಗಳೊಂದಿಗೆ ನಾನು, ವಿನಯ್‌ ಕುಮಾರ್‌ ಆರ್‌., ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ. ಇದು ಸುಲಭ ನಿರ್ಧಾರವಲ್ಲ. ಆದರೆ ಪ್ರತಿಯೋರ್ವ ಕ್ರೀಡಾಪಟುವಿನ ಬಾಳ್ವೆಯಲ್ಲಿ ಇದೊಂದು ಅನಿವಾರ್ಯ ಘಟ್ಟ…’ ಎಂದು ವಿನಯ್‌ ಕುಮಾರ್‌ ಟ್ವಿಟರ್‌ ಮೂಲಕ ಕ್ರಿಕೆಟ್‌ ವಿದಾಯದ ಸುದ್ದಿಯನ್ನು ಬಿತ್ತರಿಸಿದರು.

“ಆದರೆ ದಾವಣಗೆರೆ ಎಕ್ಸ್‌ಪ್ರೆಸ್‌ ಒಂದು ನಿಲ್ದಾಣದಲ್ಲಿ ನಿಂತಿದೆಯೇ ಹೊರತು ಹಳಿ ತಪ್ಪಿಲ್ಲ. ಈ ಅದ್ಭುತ ಕ್ರೀಡೆಗೆ ಮರಳಿ ಕೊಡುಗೆಯನ್ನು ನೀಡುವ ಸಲುವಾಗಿ ಓಟ ಮುಂದುವರಿಸಲಿದೆ. ನಿದ್ರಿಸುವ ಮುನ್ನ ಮೈಲುಗಟ್ಟಲೆ ಪಯಣ ಮಾಡಲಿಕ್ಕಿದೆ. ನನ್ನ ಬದುಕಿನುದ್ದಕ್ಕೂ ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ ನಿಮ್ಮೆಲ್ಲರಿಗೂ ಥ್ಯಾಂಕ್ಸ್‌’ ಎಂದು 37 ವರ್ಷದ ವಿನಯ್‌ ಟ್ವೀಟ್‌ನಲ್ಲಿ ತಿಳಿಸಿದರು.

ಪ್ರಥಮ ದರ್ಜೆ ಸಾಧಕ :

1984ರ ಫೆ. 12ರಂದು ದಾವಣಗೆರೆಯಲ್ಲಿ ಜನಿಸಿದ ರಂಗನಾಥ್‌ ವಿನಯ್‌ ಕುಮಾರ್‌ ಭಾರತದ ಪರ ಏಕೈಕ ಟೆಸ್ಟ್‌, 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. 2012ರ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಅವರು ಜಹೀರ್‌, ಉಮೇಶ್‌ ಯಾದವ್‌ ಮತ್ತು ಇಶಾಂತ್‌ ಜತೆಗೂಡಿ ಬೌಲಿಂಗ್‌ ನಡೆಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೈಕಲ್‌ ಹಸ್ಸಿ ಅವರ ವಿಕೆಟ್‌ ಉರುಳಿಸಿದ್ದಷ್ಟೇ ಅವರ ಸಾಧನೆಯಾಗಿದೆ. ಏಕದಿನದಲ್ಲಿ 38 ಮತ್ತು ಟಿ20ಯಲ್ಲಿ 10 ವಿಕೆಟ್‌ ಕೆಡವಿದ್ದಾರೆ.

Advertisement

2004-05ರ ರಣಜಿ ಋತುವಿನಲ್ಲಿ ಅವರು ಕರ್ನಾಟಕ ಪರ ಪದಾರ್ಪಣೆ ಮಾಡಿದರು. ಯಶಸ್ವಿ ನಾಯಕನಾಗಿಯೂ ಮೂಡಿಬಂದರು. ಕೊನೆಯಲ್ಲೊಂದು ವರ್ಷ ಪುದುಚೆರಿಯನ್ನು ಪ್ರತಿನಿಧಿಸಿದ ವಿನಯ್‌, 139 ಪ್ರಥಮ ದರ್ಜೆ ಪಂದ್ಯಗಳಿಂದ 504 ವಿಕೆಟ್‌ ಹಾಗೂ 3,311 ರನ್‌ ಸಂಪಾದಿಸಿದ್ದಾರೆ. 32ಕ್ಕೆ 8 ವಿಕೆಟ್‌ ಕೆಡವಿದ್ದು ಅತ್ಯುತ್ತಮ ಸಾಧನೆ. ಎರಡು ಶತಕಗಳನ್ನೂ ಬಾರಿಸಿ ತಮ್ಮ ಆಲ್‌ರೌಂಡ್‌ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಐಪಿಎಲ್‌ನಲ್ಲಿ ಕೊಚ್ಚಿ, ಕೆಕೆಆರ್‌, ಮುಂಬೈ ಮತ್ತು ಆರ್‌ಸಿಬಿ ತಂಡಗಳ ಪರ ಆಡಿದ್ದಾರೆ.

ಮಹಾನ್‌ ಆಟಗಾರರ ಒಡನಾಟ :

ಲೆಜೆಂಡ್ರಿ ಕ್ರಿಕೆಟಿಗರಾದ ತೆಂಡುಲ್ಕರ್‌, ಕುಂಬ್ಳೆ, ಸೆಹವಾಗ್‌, ಗಂಭೀರ್‌, ಧೋನಿ, ಕೊಹ್ಲಿ ಮೊದಲಾದವರೊಂದಿಗೆ ಆಡುವ ಅವಕಾಶ ಪಡೆದ ತಾನು ನಿಜಕ್ಕೂ ಅದೃಷ್ಟವಂತ ಎಂದು ವಿನಯ್‌ ಇದೇ ಸಂದರ್ಭದಲ್ಲಿ ಹೇಳಿದರು.

 

ವಿಶ್ವಕಪ್‌ ಹೀರೋ ಯೂಸುಫ್ ಪಠಾಣ್‌ :

ಪಠಾಣ್‌ ಸೋದರರಲ್ಲಿ ಹಿರಿಯರಾದ ಯೂಸುಫ್ ಪಠಾಣ್‌ ಹೊಡಿಬಡಿ ಆಟಕ್ಕೆ ಖ್ಯಾತರಾಗಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌, ಕೆಕೆಆರ್‌ನ ಐಪಿಎಲ್‌ ಗೆಲುವಿನ ವೇಳೆ ತಂಡದ ಸ್ಟಾರ್‌ ಆಟಗಾರನಾಗಿ ಮಿಂಚಿದ್ದು ಯೂಸುಫ್ ಹೆಗ್ಗಳಿಕೆ.

“ನನ್ನ ಬದುಕಿನ ಪ್ರಮುಖ ಇನ್ನಿಂಗ್ಸ್‌ ಒಂದಕ್ಕೆ ಪೂರ್ಣವಿರಾಮ ಹಾಕುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟಿಗೆ ಅಧಿಕೃತವಾಗಿ ವಿದಾಯ ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ಕುಟುಂಬದವರಿಗೆ, ಗೆಳೆಯರಿಗೆ, ಅಭಿಮಾನಿಗಳಿಗೆ, ತಂಡ, ಕೋಚ್‌ ಮತ್ತು ಇಡೀ ದೇಶಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದರು. ಈ ಸಂದರ್ಭದಲ್ಲಿ ಬಿಸಿಸಿಐ ಮತ್ತು ಬರೋಡ ಕ್ರಿಕೆಟ್‌ ಮಂಡಳಿಯನ್ನೂ ಅವರು ಸ್ಮರಿಸಿದರು.

ಯೂಸುಫ್ ಪಠಾಣ್‌ 57 ಏಕದಿನ ಪಂದ್ಯಗಳಿಂದ 810 ರನ್‌ ಹೊಡೆದಿದ್ದಾರೆ. 2 ಶತಕ, 3 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. 22 ಟಿ20 ಪಂದ್ಯಗಳಿಂದ 236 ರನ್‌ ಬಾರಿಸಿದ್ದಾರೆ. 2012ರಲ್ಲಿ ಭಾರತವನ್ನು ಕೊನೆಯ ಸಲ ಪ್ರತಿನಿಧಿಸಿದ್ದರು. ಕಳೆದೆರಡು ಐಪಿಎಲ್‌ ಹರಾಜಿನಲ್ಲಿ ಅವರು ಮಾರಾಟವಾಗಿರಲಿಲ್ಲ.

ಸ್ಮರಣೀಯ ಕ್ಷಣಗಳು :

“ಎರಡು ವಿಶ್ವಕಪ್‌ ವಿಜೇತ ತಂಡದ ಸದಸ್ಯನಾಗಿದ್ದು, ತೆಂಡುಲ್ಕರ್‌ ಅವರನ್ನು ಹೆಗಲ ಮೇಲೆ ಹೊತ್ತು ಸುತ್ತು ಬಂದದ್ದೆಲ್ಲ ನನ್ನ ಪಾಲಿನ ಸ್ಮರಣೀಯ ಕ್ಷಣಗಳಾಗಿವೆ. ನನ್ನ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ ನಾಯಕರಾದ ಧೋನಿ, ವಾರ್ನ್, ಗಂಭೀರ್‌ ಮತ್ತು ಜೇಕಬ್‌ ಮಾರ್ಟಿನ್‌ ಅವರಿಗೆ ವಿಶೇಷ ಥ್ಯಾಂಕ್ಸ್‌’ ಎಂದು ಪಠಾಣ್‌ ಹೇಳಿದರು.

ಪಾಕಿಸ್ಥಾನ ವಿರುದ್ಧದ 2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಯೂಸುಫ್ ಪಠಾಣ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು. ಗಂಭೀರ್‌ ಜತೆ ಆರಂಭಿಕನಾಗಿ ಇಳಿದು 8 ಎಸೆತಗಳಿಂದ 15 ರನ್‌ ಹೊಡೆದಿದ್ದರು.

174 ಐಪಿಎಲ್‌ ಪಂದ್ಯಗಳಿಂದ 3,204 ರನ್‌, ಭಾರತದ ಅತೀ ವೇಗದ ಶತಕದ ದಾಖಲೆ, 16 ಪಂದ್ಯಶ್ರೇಷ್ಠ ಗೌರವ, 42 ವಿಕೆಟ್‌ ಸಂಪಾದಿಸಿದ ಹೆಗ್ಗಳಿಕೆ ಯೂಸುಫ್ ಅವರದು.

Advertisement

Udayavani is now on Telegram. Click here to join our channel and stay updated with the latest news.

Next