Advertisement

Yogish Gowda ಹತ್ಯೆ ಪ್ರಕರಣ: ಎ. 18ರಂದು Vinay Kulkarni ಭವಿಷ್ಯ

12:05 AM Apr 14, 2023 | Team Udayavani |

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ, ಜಿ.ಪಂ. ಸದಸ್ಯ ಯೋಗೇಶ್‌ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ತನಗೆ ಧಾರವಾಡ ಪ್ರವೇಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯ ತೀರ್ಪುನ್ನು ಜನ‌ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎ. 18ಕ್ಕೆ ಮುಂದೂಡಿದೆ.

Advertisement

ಚುನಾವಣೆ ಹಿನ್ನೆಲೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ… ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಗುರುವಾರ ಕೂಡ ಕೋರ್ಟ್‌ ವಿಚಾರಣೆ ನಡೆಸಿತು.

ಬುಧವಾರ ಸಿಬಿಐ ವಿಶೇಷ ಅಭಿಯೋಜಕ ಮಿತ್ತಳಿಕೆ ಗಂಗಾಧರ ಶೆಟ್ಟಿ ಮಂಡಿಸಿದ ವಾದಕ್ಕೆ ಪ್ರತಿಯಾಗಿ, ಆರೋಪಿ ಪರ ವಕೀಲರಾದ ಸಿ.ಎಚ್‌. ಹನುಮಂತರಾಯಪ್ಪ ಅವರು, ಆರೋಪಿಗೆ ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು. ತಮ್ಮ ಕಕ್ಷಿದಾರರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಅನುಮಾನವಿದ್ದರೆ ಎಲ್ಲ ಸಾಕ್ಷಿಗಳಿಗೆ ಭದ್ರತೆ ನೀಡಬಹುದು.

ಸಿಬಿಐಯಿಂದ ಸಾಧ್ಯವಾಗದಿದ್ದರೆ ಸ್ಥಳೀಯ ಪೊಲೀಸರಿಂದ ಭದ್ರತೆ ನೀಡಬಹುದು. ತಮ್ಮ ಕಕ್ಷಿದಾರ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಬೇಕಿದೆ ಎಂದು ಕೋರ್ಟ್‌ಗೆ ಮನವಿ ಮಾಡಿದರು.

ಅದಕ್ಕೆ ಆಕ್ಷೇಪಿಸಿದ ಸಿಬಿಐ ವಿಶೇಷ ಅಭಿಯೋಜಕರಾದ ಮಿತ್ತಳಿಕೆ ಗಂಗಾಧರ ಶೆಟ್ಟಿ, ಸಿಬಿಐನಿಂದ ಎಲ್ಲ 90 ಸಾಕ್ಷಿಗಳಿಗೆ ಭದ್ರತೆ ನೀಡಲು ಸಾಧ್ಯವಿಲ್ಲ. ಇನ್ನು ಸ್ಥಳೀಯ ಪೊಲೀಸರೇ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಹಣ ಪಡೆದು ಸಾಕ್ಷಿ ಮುಚ್ಚಿಡಲು ಯತ್ನಿಸಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ನೇರವಾಗಿ ಧಾರವಾಡಕ್ಕೆ ತೆರಳಿ ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಆದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ವಾದ ಮಂಡಿಸಿದರು. ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ವಿಚಾರಣೆ ಪೂರ್ಣಗೊಳಿಸಿ, ಎ. 18ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಕೂಡ ಹಾಜರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next