ಬೆಳಗಾವಿ: ಜಿ.ಪಂ ಸದಸ್ಯನ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಶುಕ್ರವಾರವೂ ಬಿಡುಗಡೆ ಭಾಗ್ಯ ಸಿಗಲಿಲ್ಲ. ಜಾಮೀನು ಸಿಕ್ಕರೂ ಆದೇಶ ಪ್ರತಿ ಬಾರದ ಕಾರಣ ಇನ್ನೊಂದು ದಿನ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
ಸುಪ್ರೀಂ ಕೋರ್ಟ್ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿದ್ದರೂ ಇನ್ನೊಂದು ದಿನ ಜೈಲಿನಲ್ಲಿ ಉಳಿಯಬೇಕಾಗಿದೆ. ವರಮಹಾಲಕ್ಷ್ಮೀ ಹಬ್ಬದಂದು ಶುಕ್ರವಾರ ಬಿಡುಗಡೆ ಆಗಲಿಲ್ಲ. ಹಿಂಡಲಗಾ ಜೈಲಿನಿಂದ ಬಿಡುಗಡೆ ಬಳಿಕ ಅದ್ಧೂರಿಯಾಗಿ ಸ್ವಾಗತಿಸಲು ವಿನಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಬಿಡುಗಡೆ ಆಗದ್ದಕ್ಕೆ ನಿರಾಶರಾಗಿ ವಾಪಸ್ ಮರಳಿದ್ದಾರೆ.
ಇದನ್ನೂ ಓದಿ:ಹುಣಸೂರನ್ನು ಜಿಲ್ಲೆಯನ್ನಾಗಿಸಲು ಹೋರಾಟ ನಡೆಸುತ್ತೇವೆ: ಶಾಸಕ ಎಚ್.ಪಿ.ಮಂಜುನಾಥ್
ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಸಾಕ್ಷಿನಾಶ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿತ್ತು. ಆದೇಶ ಪ್ರತಿ ಮಾತ್ರ ವಕೀಲರ ಕೈಗೆ ಕೈಯಲ್ಲಿ ನೀಡದೆ ಹಿಂಡಲಗಾ ಜೈಲಿಗೆ ಸ್ಪೀಡ್ ಪೋಸ್ಟ್ ಮಾಡಿದೆ. ಸರ್ಕಾರಿ ರಜೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಪ್ರತಿ ಶನಿವಾರ ಆ. 21ರಂದು ಜೈಲಿಗೆ ಬರುವ ಸಾಧ್ಯತೆ ಇದ್ದು, ಜತೆಗೆ ನ್ಯಾಯಾಲಯಗಳಿಗೂ ಶುಕ್ರವಾರ ರಜೆಯಿದೆ. ಹೀಗಾಗಿ ಜಾಮೀನು ಸಿಕ್ಕರೂ ವಿನಯ ಜೈಲಿನಲ್ಲಿಯೇ ಉಳಿಯಬೇಕಾಗಿದೆ.
ಬಿಡುಗಡೆ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದೇಶ ಪ್ರತಿ ಬಾರದ್ದಕ್ಕೆ ಬಂದೋಬಸ್ತ್ ವಾಪಸ್ ಪಡೆಯಲಾಗಿದೆ