ಧಾರವಾಡ: ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪದಡಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಧಾರವಾಡದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಬಂದರು.
ಬೆಳಗ್ಗೆ 10 ಗಂಟೆಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರಟು ಧಾರವಾಡದ ಮಿನಿ ವಿಧಾನಸೌಧ ಆವರಣದಲ್ಲಿ ಇರುವ ನೋಂದಣಿ ಕಚೇರಿಗೆ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆತರಲಾಗಿತ್ತು. ವಿನಯ್ ಡೈರಿ ಸೇರಿದಂತೆ ಅನೇಕ ಉದ್ಯಮಗಳ ವ್ಯವಹಾರ ಮತ್ತು ವಹಿವಾಟುಗಳ ಕಾರ್ಯ ಮುನ್ನಡೆಸಲು ಅವರ ಪತ್ನಿ ಮತ್ತು ಮಕ್ಕಳಿಗೆ ಬಿಟ್ಟುಕೊಡುವ ಜನರಲ್ ಪವರ್ ಆಪ್ ಅಟಾರ್ನಿಯನ್ನು ಅವರು ನೋಂದಣಿ ಮಾಡಿಸಿದರು.
ಇದನ್ನೂ ಓದಿ:ಯಾರಿಗೆ ಪಟ್ಟಾಭಿಷೇಕ?; ಬಿಎಸ್‌ವೈ ಜೊತೆ ನಿರಾಣಿ, ಬೊಮ್ಮಾಯಿ ಎರಡು ಗಂಟೆ ಕಾಲ ಚರ್ಚೆ
ನಂತರ ಹೊರಬಂದು ಅಭಿಮಾನಿಗಳತ್ತ ಕೈ ಬೀಸಿದ ವಿನಯ್ ಗೆ ಶಿಳ್ಳೆ ಮತ್ತು ಜಯ ಘೋಷದ ಉತ್ತರ ಸಿಕ್ಕಿತು.
ವಿನಯ್ ಧಾರವಾಡಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅವರ ನೂರಾರು ಅಭಿಮಾನಿಗಳು ಮಿನಿ ವಿಧಾನಸೌಧ ಆವರಣದಲ್ಲಿ ಜಮಾಯಿಸಿದರು. ಅಷ್ಟೇ ಅಲ್ಲ ವಿನಯ್ ಪರ ಘೋಷಣೆ ಕೂಗಿ ಜೈಕಾರ ಹಾಕಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.