Advertisement

ವಿಮ್ಸ್‌ನ ದುಃಸ್ಥಿತಿ ಇನ್ನಾದರೂ ಸುಧಾರಿಸಲಿ

11:34 PM Sep 15, 2022 | Team Udayavani |

ವೈದ್ಯರು ಮಾನವ ಸ್ವರೂಪದ ದೇವರು. ಅನಾರೋಗ್ಯಕ್ಕೆ ಔಷಧ ನೀಡಿ ಬದುಕಿಗೆ ಸ್ಫೂರ್ತಿ ನೀಡುವ ಚಿಲುಮೆ. ಆದರೆ ಬಳ್ಳಾರಿಯ ವಿಮ್ಸ್‌ನಲ್ಲಿ ಬುಧವಾರ ಆಮ್ಲಜನಕ ಪೂರೈಕೆಯಾಗದೆ ನಾಲ್ವರು ಮೃತಪಟ್ಟ ಘಟನೆ ಅತೀ ದೊಡ್ಡ ದುರಂತ. ಅದಕ್ಕಿಂತಲೂ ಹೆಚ್ಚಾಗಿ ಆಡಳಿತ ಮಂಡಳಿಯ ಹೊಣೆಗೇಡಿತನಕ್ಕೆ ಕೈಗನ್ನಡಿ. ಚಿಕಿತ್ಸೆಗೆ ದಾಖಲಾದ ಬಡಜೀವಗಳು ಆಡಳಿತ ಯಂತ್ರದ ವೈಫ‌ಲ್ಯಕ್ಕೆ ಬಲಿಯಾಗಿದ್ದು ಕರಾಳ ವ್ಯವಸ್ಥೆಯ ಮುಖವಾಡವನ್ನು ಅನಾವರಣಗೊಳಿಸಿದೆ.

Advertisement

ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದವರೇನೂ ಸಿರಿವಂತರಲ್ಲ. ಖಾಸಗಿ ಆಸ್ಪತ್ರೆಗೆ ತೆರಳಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯಲು ಶಕ್ತರಲ್ಲದ ಕೂಲಿ ನಾಲಿ ಮಾಡಿ ಜೀವನ ಮಾಡುತ್ತಿದ್ದವರು. ಚೇಳು ಕಡಿತದ ಚಿಕಿತ್ಸೆಗಾಗಿ ಬಂದ 18 ವರ್ಷದ ಮನೋಜ್‌, ಹಾವು ಕಡಿತದ ಚಿಕಿತ್ಸೆಗಾಗಿ ಬಂದ ಚಿಟ್ಟೆಮ್ಮ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಮೌಲಾ ಹುಸೇನ್‌, ಚಂದ್ರಮ್ಮ “ಜೀವರಕ್ಷಕ’ವೇ ಇಲ್ಲದೆ ಅಸುನೀಗಿದ್ದಾರೆ.

ಕೋಟ್ಯಂತರ ರೂ. ಖರ್ಚು ಮಾಡಿ ಸರಕಾರ ಬಡವರಿಗಾಗಿ ಆಸ್ಪತ್ರೆ ನಡೆಸುತ್ತದೆ. ಬಂದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಚಿಕಿತ್ಸೆ ಒದಗಿಸಬೇಕಿದ್ದ ವೈದ್ಯರು, ಆಡಳಿತ ಮಂಡಳಿ, ಸಿಬಂದಿ, ಇದರ ಮೇಲ್ವಿ­ಚಾರಣೆ ಮಾಡಬೇಕಿದ್ದ ಜಿಲ್ಲಾಡಳಿತ, ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತವರಂತೆ ವರ್ತಿಸಿದ್ದು ಅಕ್ಷಮ್ಯ. ತುರ್ತು ನಿಗಾ ಘಟಕದಲ್ಲಿ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ವಿಶೇಷ ವ್ಯವಸ್ಥೆ ಇರುತ್ತದೆ. ಪ್ರತ್ಯೇಕ ಸಿಬಂದಿಯೂ ಇರು­ತ್ತಾರೆ. ವಿದ್ಯುತ್‌ ಕೈಕೊಟ್ಟರೆ ಜನರೇಟರ್‌ ಮೂಲಕ ಸರಾಗವಾಗಿ ಆಮ್ಲಜನಕ ಪೂರೈಸುವ ವ್ಯವಸ್ಥೆಯೂ ಇರುತ್ತದೆ. ಆದರೆ ನಿರ್ಲಕ್ಷ್ಯದ ಪರಮಾ­ವಧಿ ಕಾರಣ ನಡೆಯಬಾರದ ಅಚಾತುರ್ಯ ನಡೆದು ಹೋಗಿದೆ.

ವಿಮ್ಸ್‌ ಆಸ್ಪತ್ರೆಯ ಎಂಐಸಿಯು, ಎಸ್‌ಐಸಿಯು ವಿಭಾಗದಲ್ಲಿರುವ ವೆಂಟಿಲೇಟರ್‌ಗಳು ಹಳೆಯದಾಗಿವೆ. ವಿದ್ಯುತ್‌ ಪೂರೈಕೆ ವ್ಯವಸ್ಥೆ ಈಗಲೂ 50 ವರ್ಷ ಹಿಂದೆ ಹಾಕಿದ್ದ ವಿದ್ಯುತ್‌ ವಾಹಕ ಉಪಕರಣಗಳು ಮತ್ತು ತಂತಿಯಿಂದಲೇ ನಡೆಯುತ್ತಿದೆ ಎಂಬ ಆರೋಪವೂ ಇದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಉತ್ತಮ ಚಿಕಿತ್ಸೆ ನಿರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆಯೂ ಮೂಡಿದೆ.

ಘಟನೆಯ ಅನಂತರ ವಿಮ್ಸ್‌ ನಿರ್ದೇಶಕರು ಘಟನೆಗೆ ಚಿಕಿತ್ಸೆ ದೊರೆಯದಿ ರು­ವುದು ಕಾರಣವಲ್ಲ, ಗಂಭೀರ ಆರೋಗ್ಯ ಸಮಸ್ಯೆ ಕಾರಣಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ ಎಂದು ಸಮರ್ಥಿಸಿಕೊಳ್ಳುವ ಯತ್ನ ಮಾಡಿ­ದ್ದಾರೆ. ವಿಮ್ಸ್‌ಗೆ ವಿದ್ಯುತ್‌ ಪೂರೈಸುವ 11 ಕೆವಿ ಮಾರ್ಗದಲ್ಲಿ ಬುಧವಾರ ಬೆಳಗ್ಗೆ 5 ನಿಮಿಷವಷ್ಟೇ ವಿದ್ಯುತ್‌ ಕಡಿತವಾಗಿದೆ. ಉಳಿದಂತೆ ಕಳೆದ ಮೂರು ದಿನಗಳಲ್ಲಿ ವಿದ್ಯುತ್‌ ಸ್ಥಗಿತವಾಗಿಲ್ಲ ಎಂದು ಜೆಸ್ಕಾಂ ಅಧಿಕಾರಿ­ಗಳು ಹೇಳಿದ್ದಾರೆ. ಹಾಗಾದರೆ ನಾಲ್ಕು ಜೀವಗಳನ್ನು ಬಲಿ ಪಡೆದ ಘಟ­ನೆಗೆ ಕಾರಣ ಏನು, ಹೊಣೆ ಯಾರು ಎಂಬುದು ಪತ್ತೆ ಹಚ್ಚಬೇಕಿದೆ.

Advertisement

ಸರಕಾರ ತತ್‌ಕ್ಷಣ ವಿಮ್ಸ್‌ ಆಸ್ಪತ್ರೆಯ ಲೋಪಗಳನ್ನು ಸರಿಪಡಿಸ­ಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ನೀಡಿ ಪರಿಸ್ಥಿತಿ ಸರಿಪಡಿಸ­ಬೇಕು. ಘಟನೆ ಕಾರಣರಾದವರನ್ನು ಮುಲಾಜಿಲ್ಲದೆ ಶಿಕ್ಷಿಸಬೇಕು. ಸಮಿತಿ ನೀಡುವ ವರದಿಗಳನ್ನು ಮೂಲೆಗೆ ಎಸೆದು ತೇಪೆ ಹಚ್ಚುವ ಕೆಲಸ ಮಾಡಬಾರದು. ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳ ಆಮ್ಲಜನಕ ಪೂರೈಕೆ ಘಟಕ, ಇತರ ವ್ಯವಸ್ಥೆಯನ್ನು ಪರಿಶೀಲಿಸಿ ಸರಿಪಡಿಸಬೇಕು. ಘಟನೆ ನಡೆದಾಗ ಮಾತ್ರ ಕ್ರಮ ಎಂಬಂತೆ ವರ್ತಿಸಬಾರದು. ವಿಮ್ಸ್‌ ನಲ್ಲಿ ನಡೆದ ಘಟನೆ ಇತರೆಡೆ ಮರುಕಳಿಸದಂತೆ ಎಚ್ಚರ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next