Advertisement

ಗ್ರಾಮಸ್ಥರಿಂದ ಪೊಲೀಸ್‌ ಠಾಣೆಗೆ ಬೆಂಕಿ

03:45 AM Feb 06, 2017 | |

ಗದಗ: ಅಕ್ರಮ ಮರಳು ಸಾಗಣೆ ಆರೋಪದ ಮೇರೆಗೆ ಲಕ್ಷ್ಮೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದ ಲಾರಿ ಚಾಲಕ ಮೃತಪಟ್ಟ ಹಿನ್ನೆಲೆಯಲ್ಲಿ  ಆಕ್ರೋಶಗೊಂಡ ಬಟ್ಟೂರು ಗ್ರಾಮಸ್ಥರು, ಪೊಲೀಸರ ಚಿತ್ರಹಿಂಸೆ ಸಾವಿಗೆ ಕಾರಣ ಎಂದು ಆರೋಪಿಸಿ ಭಾನುವಾರ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜನರ ಸಿಟ್ಟಿಗೆ ಒಂದು ಪೊಲೀಸ್‌ ಜೀಪ್‌ ಹಾಗೂ ಏಳು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

Advertisement

ಘಟನೆಯಿಂದ ಲಕ್ಷ್ಮೇಶ್ವರದಲ್ಲಿ ದಿನವಿಡೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಬಿಗಿಭದ್ರತೆ ವಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಹಾಗೂ ಪೊಲೀಸ್‌ ಜೀಪ್‌ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಪಿಎಸ್‌ಐ ಮೇಲೆ ಕೊಲೆ ಪ್ರಕರಣವನ್ನು ಕುಟುಂಬಸ್ಥರು ದಾಖಲಿಸಿದ್ದರೆ, ಪೊಲೀಸ್‌ ಠಾಣೆ ಧ್ವಂಸಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ವಿರುದ್ಧ ಪ್ರಕರಣವನ್ನು ಪೊಲೀಸರು ದಾಖಲಿಸಿ ಕೊಂಡಿದ್ದಾರೆ.
ಈ ನಡುವೆ ಪ್ರಕರಣವನ್ನು  ಸಿಐಡಿ ಅಥವಾ ನ್ಯಾಯಾಂಗ ತನಿಖೆಗೊಳಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಡಿಸಿ ಭರವಸೆ ನೀಡಿದ್ದಾರೆ. ಈ ನಡುವೆ ಐಜಿಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಶಿವಪ್ಪ ದುಂಡಪ್ಪ ಗೋಣಿ (24) ಶನಿವಾರ ರಾತ್ರಿ ಲಕ್ಷ್ಮೇಶ್ವರ ಮಾರ್ಗವಾಗಿ ಮರಳು ಸಾಗಿಸುತ್ತಿದ್ದ. ಈ ವೇಳೆ ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಎಸ್‌. ದೇವಾನಂದ ಹಾಗೂ ಸಿಬ್ಬಂದಿ ಲಾರಿ ತಡೆದು ವಿಚಾರಣೆಗೆ ಯತ್ನಿಸಿದ್ದಾರೆ. ಆಗ ಪೊಲೀಸರನ್ನು ಕಂಡು ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಆತನನ್ನು ಹಿಂಬಾಲಿಸಿದ ಪೊಲೀಸರು ಥಳಿಸಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಮನೆಗೆ ತೆರಳಿದ ಬಳಿಕ ಶಿವಪ್ಪನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಕೂಡಲೇ  ಸ್ಥಳೀಯ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗಿನ ಜಾವ ಶಿವಪ್ಪ ಕೊನೆಯುಸಿರೆಳೆದ್ದಾರೆ. ಇದರಿಂದ ಕೆರಳಿದ ಮೃತನ ಸಂಬಂಧಿಧಿಕರು ಹಾಗೂ  ಗ್ರಾಮಸ್ಥರು ಪಟ್ಟಣದ ಪೊಲೀಸ್‌ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಠಾಣೆಯ ಪೀಠೊಪಕರಣ, ಕಿಟಕಿ ಗಾಜು ಧ್ವಂಸಗೊಳಿಸಿದ್ದಾರೆ. ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಠಾಣೆಗೆ ಬೆಂಕಿ ಹಚ್ಚಿದ್ದಾರೆ.  ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಟಯರ್‌ಗೆ ಬೆಂಕಿ: ಪೊಲೀಸ್‌ ಠಾಣೆ ಮೇಲಿನ ದಾಳಿಯಿಂದಾಗಿ ಪಟ್ಟಣದೆಲ್ಲೆಡೆ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ನಡುವೆ ಶಿಗ್ಲಿ ನಾಕಾದಲ್ಲಿ ಜಮಾಯಿಸಿದ್ದ ಉದ್ರಿಕ್ತರು ಟೈರ್‌ಗೆ ಬೆಂಕಿ ಹಚ್ಚಿ, ಶಿವಪ್ಪ ಸಾವಿಗೆ ಕಾರಣರಾದ ಪಿಎಸ್‌ಐ ದೇವಾನಂದ ಹಾಗೂ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಲ್ಲೆಡೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಯಿತು.  ಪ್ರಮುಖ ಸಾರ್ವಜನಿಕ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಐದು ಕೆಎಸ್‌ಆರ್‌ಪಿ, ಹತ್ತು ಡಿಎಎಆರ್‌ ಪಡೆ, ಇಬ್ಬರು ಎಎಸ್‌ಪಿ, ಆರು ಜನ ಡಿಎಸ್‌ಪಿಗಳನ್ನು ನಿಯೋಜಿಸಲಾಯಿತು. ಈ ನಡುವೆ ಕುಟುಂಬಕ್ಕೆ ಆಧಾರವಾಗಿದ್ದ ಶಿವಪ್ಪ ಗೋಣಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರ  ರೋದನ ಮುಗಿಲು ಮುಟ್ಟಿತ್ತು.

ಐಜಿಪಿ ಭೇಟಿ:  ಸ್ಥಳಕ್ಕೆ ಬೆಳಗಾವಿ ವಲಯದ ಐಜಿಪಿ ರಾಮಚಂದ್ರ ರಾವ್‌ ಭೇಟಿ ನೀಡಿ ಪರಿಶೀಲಿಸಿ,  ಘಟನೆ ಲಾಕಪ್‌ ಡೆತ್‌ ಅಲ್ಲ. ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಪಿಎಸ್‌ಐ ದಾಳಿ ನಡೆಸಿದ್ದರು. ಈ ವೇಳೆ ಚಾಲಕ ಮತ್ತು ಕ್ಲಿನರ್‌ ಪರಾರಿಯಾಗಿದ್ದು, ಆಸ್ಪತ್ರೆಯಲ್ಲಿ ಶಿವಪ್ಪ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಭಾನುವಾರ ಬೆಳಗಿನ ಜಾವ ಠಾಣೆಗೆ ನುಗ್ಗಿ ಸರ್ಕಾರಿ ಆಸ್ತಿ ನಾಶಪಡಿಸಿದ್ದರಿಂದ ಐದು ಪ್ರಕರಣ ದಾಖಲಿಸಲಾಗಿದೆ ಎಂದರು.  ಘಟನೆಗೆ ಕಾರಣ ಎನ್ನಲಾದ ಪಿಎಸ್‌ಐ ಎಸ್‌.ದೇವಾನಂದ ಹಾಗೂ ಜೀಪ್‌ ಚಾಲಕನನ್ನು ಅಮಾನತುಗೊಳಿಸಿ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ ಬಾಬು ಆದೇಶಿಸಿದ್ದಾರೆ.

ಪೊಲೀಸರ ನಡೆ ಅನುಮಾನಕ್ಕೆಡೆ:
ಇಡೀ ಪ್ರಕರಣದಲ್ಲಿ ಪಿಎಸ್‌ಐ ದೇವಾನಂದ ಹಾಗೂ ಸಿಬ್ಬಂದಿ ನಡೆಯೇ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ. ಪೊಲೀಸರು ಥಳಿಸಿದ್ದರಿಂದಲೇ ಲಾರಿ ಚಾಲಕ ಶಿವಪ್ಪ ಮೃತಪಟ್ಟಿದ್ದಾನೆ ಎಂಬುದು ಸಾರ್ವಜನಿಕರ ಆರೋಪ. ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮರಳು ಲಾರಿ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಆದರೆ, ಘಟನೆಗೆ ಸಂಬಂಧಿಸಿ ಪೊಲೀಸರು ಕೇವಲ ಪಿಎಸ್‌ಐ ದೇವಾನಂದ ವಿರುದ್ಧ ಹತ್ಯೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಮೃತನ ಕುಟುಂಬಕ್ಕೆ ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ 20 ಸಾವಿರ ರೂ. ಪರಿಹಾರ ಹಾಗೂ ಅಂತ್ಯಸಂಸ್ಕಾರಕ್ಕಾಗಿ 5000 ರೂ. ನೆರವು ನೀಡಲಾಗುವುದು. ಪ್ರಕರಣದ ಸತ್ಯಾಂಶ  ತಿಳಿಯಲು ನ್ಯಾಯಾಂಗ ಹಾಗೂ ಸಿಒಡಿ ತನಿಖೆಗೆ ವಹಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
– ಮನೋಜ ಜೈನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next