ಕೆ.ಆರ್.ಪುರ: ಬೆಂಗಳೂರು ನಗರದಲ್ಲಿನ ಕಟ್ಟಡಗಳ ಅವಶೇಷಗಳನ್ನು ಕಲ್ಕೆರೆ ಕೆರೆಯಿಂದ ರಾಂಪುರ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ಸುರಿಯುತ್ತಿರುವುದನ್ನು ವಿರೋಧಿಸಿ ಕಲ್ಕೆರೆ ಗ್ರಾಮಸ್ಥರು ಲಾರಿ ಮತ್ತು ಟ್ರ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟಿಸಿದರು.
ಬೆಂಗಳೂರು ನಗರದ ವಿವಿಧ ಭಾಗಗಳಿಂದ ಸಂಗ್ರಹವಾಗುವ ಕಟ್ಟಡದ ಅವಶೇಷಗಳನ್ನು ಲಾರಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬಂದು ರಾಜರೋಷವಾಗಿ ರಾಜಕಾಲುವೆಗೆ ಸುರಿಯಲಾಗುತ್ತಿದೆ. ಇವರ ಹಾವಳಿಯಿಂದಾಗಿ 100 ಅಡಿ ಆಗಲ, 20 ಅಡಿ ಅಳವಿರುವ ಬೃಹತ್ ರಾಜಕಾಲುವೆ, ಕಟ್ಟಡದ ಅವಶೇಷಗಳಿಂದ ತುಂಬಿಕೊಂಡಿದೆ. ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೆಲವರಿಗೆ ಇದೇ ದಂಧೆ: ಸ್ಥಳೀಯವಾಗಿ ಅಲ್ಪ ಪ್ರಭಾವ ಹೊಂದಿರುವ ಕೆಲವರು ಈ ಪರಿಸ್ಥಿತಿಯನ್ನೇ ಬಂಡಾವಳವಾಗಿಸಿಕೊಂಡು ದಂಧೆ ನಡೆಸುತ್ತಿದ್ದಾರೆ. ಅವಶೇಷ ಹೊತ್ತು ಬರುವ ಒಂದು ಲಾರಿಗೆ 200ರಿಂದ 300 ರೂ. ವಸೂಲಿ ಮಾಡಿ, ಕಟ್ಟಡ ಅವಶೇಷ ಸುರಿಯಲು ಅವಕಾಶ ನೀಡುತ್ತಿದ್ದಾರೆ. ಪರಿಣಾಮ, ಈ ಹಿಂದೆ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದ ರಾಜಕಾಲುವೆ ಕಟ್ಟಡ ಅವಶೇಷಗಳಿಂದ ಮುಚ್ಚಿ ಹೋಗಿದೆ ಎಂದು ದೂರಿದರು.
ಕಾಲುವೆ ಮುಚ್ಚು ಹೋಗಿರುವ ಕಾರಣ, ಆರ್.ಟಿ.ನಗರ, ಹೆಬ್ಟಾಳ, ಹೊರಮಾವು, ಆಗರ ಬಾಬುಸಾಬ್‌ಪಾಳ್ಯ, ನಾಗವಾರ ಮುಂತಾದ ಕಡೆಯಿಂದ ಬರುವ ಕೊಳೆಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಅಲ್ಲದೆ ಪ್ರತಿ ಬಾರಿ ಮಳೆ ಬಂದಾಗ ಕಲ್ಕೆರೆ ಗ್ರಾಮದ ಸುತ್ತಲ ಬಡಾವಣೆಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಅಪಾರ ಆಸ್ತಿ ನಾಶವಾಗುತ್ತಿದೆ. ಈ ಬಗ್ಗೆ ಸಂಭಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಲಾರಿಗಳನ್ನು ತಡೆದು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಕಲ್ಕೆರೆ ಗ್ರಾಮದ ಕೆ.ಮಾದೇಶ್ ತಿಳಿಸಿದರು.