Advertisement

ಇಂಗುಗುಂಡಿ ಮುಚ್ಚಲು ಗ್ರಾಮಸ್ಥರ ಒತ್ತಾಯ!

06:25 PM Sep 12, 2022 | Nagendra Trasi |

ಸಾಗರ: ವಾರದ ಹಿಂದೆ ಸುರಿದ ಭಾರೀ ಮಳೆಗೆ ಬೆದರಿದ ಗ್ರಾಮಸ್ಥರು ತಾವೇ ಊರ ಹಿಂದಿನ ಗುಡ್ಡದಲ್ಲಿ ನಿರ್ಮಿಸಿದ ಇಂಗುಗುಂಡಿಗಳನ್ನು ಮುಚ್ಚಿ, ಅಲ್ಲಿ ನೆಟ್ಟ ಗಿಡಮರಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸುತ್ತಿರುವ ಘಟನೆ ತಾಲೂಕಿನ ತಾಳಗುಪ್ಪ ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗಣೇಶ ಚೌತಿಯ ನಂತರ ಹೊಸಳ್ಳಿ, ಗೋಟಗಾರು, ಮರಡುಮನೆ, ಹಂಸಗಾರು ಭಾಗದಲ್ಲಿ ಭಾರೀ ಮಳೆ ಬಿದ್ದಿದೆ. ಒಂದು ದಿನ ಅರ್ಧ ಗಂಟೆಯ ಅವಧಿಯಲ್ಲಿ ಸುಮಾರು ಮೂರು ಸೆಂಮೀಗಳಷ್ಟು ಮಳೆ ಬಿದ್ದಿರುವ ಅಂದಾಜು ಮಾಡಲಾಗಿದೆ. ಈ ವೇಳೆ ಊಹಿಸಲಾಗದ ಪ್ರಮಾಣದಲ್ಲಿ ನೀರು ನುಗ್ಗಿ ಸುತ್ತಮುತ್ತಲಿನ ಕೆಲ ಮನೆಗಳು ಹಾಗೂ ಅಡಕೆ ತೋಟದಲ್ಲಿ ಹಾನಿಯಾಗಿದೆ.

ಈ ಹಿನ್ನೆಲೆಯಲ್ಲಿ ಊರಿನ ದೇವಸ್ಥಾನದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಈ ಕುರಿತು ಊರಿನ ಕೆಲವರು ಮಾತನಾಡಿ, ಊರಿನ ಹಿಂಭಾಗದ ಗುಡ್ಡದ ನೆತ್ತಿಯಲ್ಲಿ ಮಾಡಿರುವ ಇಂಗುಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು ಮತ್ತು ಇನ್ನು ಮುಂದೆ ಗುಡ್ಡದಲ್ಲಿ ಗಿಡಗಳನ್ನು ನೆಡಕೂಡದು. ಕಳೆದ ವಾರದ ಭೀಕರ ಮಳೆಗೆ ಊರು ಬೆಚ್ಚಿ ಬಿದ್ದಿದೆ. ಅದು ಮಾಡಿದ ಅನಾಹುತಗಳನ್ನು ಇವತ್ತಿಗೂ ಪೂರ್ತಿ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಯ ಪ್ರಸ್ತಾಪಿಸಿದ್ದಾರೆ.

ಕಳೆದ ವಾರದ ಮಳೆಗೆ ಊರಿನ ಆರಂಭದಲ್ಲಿದ್ದ ಇಂಗುಗುಂಡಿಯ ದಂಡೆ ಒಡೆದು ನೀರು ನುಗ್ಗಿದೆ. ಈ ವಿಚಾರವನ್ನು ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಶಂಕರನಾರಾಯಣ ಹಿಂಡೂಮನೆ, ಇದೇ ಪ್ರಕ್ರಿಯೆ ಗುಡ್ಡದ ನೆತ್ತಿಯಲ್ಲಿ ಇರುವ ಇಂಗುಗುಂಡಿಯಲ್ಲಿ ಆದರೆ ಗುಡ್ಡವೇ ಅಲ್ಲಲ್ಲಿ ಜರಿದು ಬಂದು ತಳದಲ್ಲಿ ಇರುವ ಊರಿಗೆ ಅಪ್ಪಳಿಸಿದರೆ ನಾಳೆ ನಮ್ಮೂರು ಇನ್ನೊಂದು ಕೊಡಗು, ಮಡಿಕೇರಿ ಆದೀತು. ಈ ಆತಂಕಕ್ಕೆ
ನಮ್ಮನ್ನು ಒಡ್ಡಿಕೊಂಡು ಬದುಕುವುದಕ್ಕೆ ಬದಲು ಗುಡ್ಡವನ್ನು ಗುಡ್ಡವಾಗಿಯೇ ಉಳಿಸಬೇಕು. ಮೊನ್ನೆ ಆಗಿದ್ದು ಅಪಾಯ ಅಲ್ಲ, ಬದಲು ಮುಂದಿನ ಮರಣ ಮೃದಂಗಕ್ಕೆ ಎಚ್ಚರಿಕೆ. ಈಗ ಇಂಗುಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಈ ಕಾರ್ಯಕ್ಕೆ ಎಂದಿನಂತೆ ಗ್ರಾಮಸ್ಥರು, ಅವತ್ತು ಇಂಗುಗುಂಡಿ ಮಾಡಲು ಸಹಕರಿಸಿದ ಅಕ್ಕಪಕ್ಕದ ಊರಿನ ಮತ್ತು ಸಾಗರದ ಆಸಕ್ತರನ್ನು ಈ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಲು ಕೋರುತ್ತಿದ್ದೇನೆ ಎಂದು ವಿನಂತಿಸಿದ್ದಾರೆ.

ಜಲಪತ್ರಕರ್ತರಾಗಿ ಖ್ಯಾತರಾಗಿರುವ ಶಿವಾನಂ ಕಳವೆ ಪ್ರತಿಕ್ರಿಯಿಸಿದ್ದು, ನೀರಿನ ಬಳಕೆ ಹೆಚ್ಚಿದ ಪರಿಣಾಮ ಈ ಸಮಸ್ಯೆ ಪರಿಹಾರಕ್ಕೆ ಇಂಗುಗುಂಡಿ, ಅರಣ್ಯೀಕರಣ, ಕೆರೆಗಳ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಈಗ ಇಂಗುಗುಂಡಿ ಮುಚ್ಚುವ ಕಾರ್ಯ ಸರಿ ಅಥವಾ ತಪ್ಪು ಎನ್ನುವ ನಿರ್ಧಾರಕ್ಕೆ ಸ್ಥಳ ವೀಕ್ಷಣೆ, ಜನರ ಅನುಭವ ಆಲಿಸಬೇಕು ಎಂದು ತಿಳಿಸಿದ್ದಾರೆ.

Advertisement

ಈ ಕುರಿತಾಗಿ ಭಾನುವಾರ ಸಮಾನಾಸಕ್ತ ಗೆಳೆಯರ ಜೊತೆ ಸ್ಥಳ ಪರಿಶೀಲನೆ ನಡೆಸಿದ ಇಂಗುಗುಂಡಿಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಪರಿಸರ ಕಾರ್ಯಕರ್ತ ಜಿತೇಂದ್ರ ಕಶ್ಯಪ್‌ ಪತ್ರಿಕೆಯೊಂದಿಗೆ ಮಾತನಾಡಿ, ಅವತ್ತಿನ ಪರಿಸ್ಥಿತಿಯಲ್ಲಿ ಇಂಗುಗುಂಡಿಗಳು ಊರಿನ ಸಂಕಷ್ಟ ಪರಿಹರಿಸಲು ನೆರವು ನೀಡುತ್ತವೆ ಎಂಬ ನಂಬಿಕೆ ಊರಿನ ಎಲ್ಲರಲ್ಲಿಯೂ ಇತ್ತು. ಆ ವೇಳೆ ನಾವು ಮಡಿಕೇರಿಯಂತಹ ಅನಾಹುತಗಳನ್ನು ನೋಡಿರಲಿಲ್ಲ. ಗುಡ್ಡದಲ್ಲಿ ಇಂಗುಗುಂಡಿ, ವನ ಸಂರಕ್ಷಣೆ ನಡೆದಿದೆಯೇ ವಿನಃ ಬೇರಾವುದೇ ರೀತಿಯ ಭೂಮಿಯ ಸ್ಥಿರತೆ ತಪ್ಪಿಸುವ ಕೆಲಸ, ಗಣಿಗಾರಿಕೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.

ಮೊನ್ನಿನ ಮೇಘಸ್ಫೋಟದ ಸಂದರ್ಭದಲ್ಲಿ ಇಂಗುಗುಂಡಿ ದಂಡೆ ಒಡೆದಿಲ್ಲ. ಕೋಡಿ ಹರಿದಿದೆ. ಬಹುಶಃ ಅವತ್ತು ಗುಡ್ಡದಲ್ಲಿ ಸುರಿದ ಕೋಟ್ಯಂತರ ಲೀಟರ್‌ ನೀರು ಇಂಗುಗುಂಡಿಗಳಲ್ಲಿ ತುಂಬಿ ಹರಿಯುವುದರ ಬದಲು ಒಮ್ಮೆಗೇ ಊರಿನತ್ತ ಧುಮುಕಿದ್ದರೆ ಇನ್ನಷ್ಟು ಅಪಾಯ ಆಗಬಹುದಿತ್ತು. ನಾವು ಮಾಡಿದ ಕೆಲಸ, ಆಗಬಹುದಾದ ಪರಿಣಾಮಗಳ ಕುರಿತು ವೈಜ್ಞಾನಿಕವಾದ ಅಧ್ಯಯನ ನಡೆಯಬೇಕು. ಎಂಟು ವರ್ಷಗಳಿಂದ ಇಂಗುಗುಂಡಿ ಭೂ ವ್ಯವಸ್ಥೆಗೆ ವರ್ತಿಸಿರುವ ರೀತಿಯ ವಿಶ್ಲೇಷಣೆ ನಡೆಯಬೇಕು. ಏಕಾಏಕಿ ಇಂಗುಗುಂಡಿ ಮುಚ್ಚುವ ಅಥವಾ ಇಲ್ಲಿನ ಗಿಡಮರಗಳನ್ನು ತೆಗೆಯುವ ಚಿಂತನೆ ನಮಗಿಲ್ಲ. ಎಂದು ತಿಳಿಸಿದರು.

ನಾವು 7 ಜನರು ನಾವು ನಿರ್ಮಾಣ ಮಾಡಿದ ಇಂಗುಗುಂಡಿ ಹಾಗೂ ನೆಟ್ಟ ಗಿಡಗಳನ್ನು ಪರಿಶೀಲಿಸಿದೆವು. ದನಕರುಗಳಿಗೆ ಸಾಕಷ್ಟು ಮೇವು, ನೀರು ಇದೆ. ಭವಿಷ್ಯದಲ್ಲೂ ಊರಿಗೆ ಯಾವುದೇ ಹಾನಿಯಾಗುವ ಪರಿಸ್ಥಿತಿ ಇರುವುದಿಲ್ಲ. ಪರಿಸರಕ್ಕೆ ಯಾವ ಹಾನಿಯೂ ಆಗಿಲ್ಲ. ಸೆ.1ರಂದು ಆದ ಮಳೆ ಹಾಗೂ ಅದರಿಂದ ಆದ ಪ್ರವಾಹ ಊರಿನಲ್ಲಿ ಆದ ಹಾನಿಗೆ ಕಾರಣ ಎಂಬ ಒಟ್ಟಾಗಿ ಅಭಿಪ್ರಾಯವನ್ನು ನೀಡಲಾಯಿತು ಎಂದು ಅವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next