Advertisement

ಗ್ರಾಮದ ಕೆರೆ ಸ್ವಚ್ಛತೆಗೆ ಗ್ರಾಮಸ್ಥರ ಒತ್ತಾಯ

09:27 PM Aug 12, 2019 | Team Udayavani |

ದೇವನಹಳ್ಳಿ: ಕುಂದಾಣ ಗ್ರಾಮದ ಸರಕಾರಿ ಪ್ರೌಢ ಶಾಲೆ ಮಾರ್ಗದಲ್ಲಿರುವ ಕೆರೆಗೆ ಬೇಕಾಬಿಟ್ಟಿಯಾಗಿ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದಾಗಿ ಸುತ್ತಲಿನ ಪರಿಸರ ಹಾಗೂ ಸಮೀಪದಲ್ಲಿರುವವರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹೀಗಾಗಿ ಕರೆಯಲ್ಲಿ ತ್ಯಾಜ್ಯ ಸುರಿಯಬಾರದು ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಕುಂದಾಣ ಗ್ರಾಮದಲ್ಲಿರುವ ಸ‌ರ್ಕಾರಿ ಪ್ರೌಢ ಶಾಲೆಗೆ ಹೋಗುವ ಮಾರ್ಗದ ಪಕ್ಕದ ಕುಂಟೆಯಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ. ಶಾಲೆಯ ಆವರಣದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ಮಕ್ಕಳು ಕೂಡ ಇದೇ ದಾರಿಯಲ್ಲಿ ಸಂಚರಿಸುವುದರಿಂದ ನಾಯಗಳು ಕಚ್ಚುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತ್ಯಾಜ್ಯ ಸುರಿಯುತ್ತಿರುವುದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗ್ರಾಪಂ ಗಮನಕ್ಕೆ ತರಲಾಗಿದೆ. ಈ ಸಂಬಂಧ ಗ್ರಾಪಂ ಅಧಿಕಾರಿಗಳು ಸಂಬಂಧಿಸಿದ ಅಂಗಡಿ ಮಾಲಿಕರಿಗೆ ನೋಟಿಸ್‌ ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಸದಸ್ಯರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಕಸದ ರಾಶಿಯಲ್ಲಿ ಕೋಳಿ ಪುಕ್ಕಗಳು, ಪ್ಲಾಸ್ಟಿಕ್‌ ಚೀಲಗಳು, ಕಸ-ಕಡ್ಡಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಕುಂಟೆ ಅಕ್ಕಪಕ್ಕದಲ್ಲಿ ನಾಯಿಗಳ ಓಡಾಟ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಶಾಲಾ ಶಿಕ್ಷಕರು ಸಹ ಇದರ ಬಗ್ಗೆ ಗ್ರಾಪಂ ಗಮನಕ್ಕೆ ತಂದಿದ್ದರು. 2 ವರ್ಷದ ಹಿಂದೆ ನಾಯಿಗಳು ಕಸ ತಂದು ಶಾಲಾವರಣ ಗಲೀಜು ಮಾಡುತ್ತಿದ್ದವು. ಇದೀಗ ಸ್ಪಲ್ಪಮಟ್ಟಿಗೆ ಕಡಿವಾಣ ಬಿದ್ದಿದೆ ಎಂದು ಹೇಳುತ್ತಾರೆ.

ರಾಶಿ ಕಸ ಹಾಕಿರುವುದರಿಂದ ಮಳೆಗಾಲದಲ್ಲಿ ಕಸ ನೀರಿನಲ್ಲಿ ಕೊಳೆತು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದಕ್ಕಿಂತ ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಸಂಬಂಧಿಸಿದವರು ಇಲ್ಲಿ ಕಸವನ್ನು ಹಾಕದೇ ಗ್ರಾಮದ ನೈರ್ಮಲ್ಯ ಕಾಪಾಡುವಂತೆ ಆಗಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

Advertisement

ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ಹೆಚ್ಚಿದೆ. ಈಗಾಗಲೇ ಸರ್ಕಾರ ಪ್ಲಾಸ್ಟಿಕ್‌ ನಿಷೇಧಿಸಿದೆ. ಗ್ರಾಮದಲ್ಲೂ ಪ್ಲಾಸ್ಟಿಕ್‌ ನಿಷೇಧಿಸಿದರೆ, ಅದರಿಂದಾಗುವ ದುಷ್ಪರಿಣಾಮ ತಡೆಯಬಹುದು. ಸುರಿಯುತ್ತಿರುವ ತ್ಯಾಜ್ಯದಿಂದ ಅನೇಕ ಸಮಸ್ಯೆ ಎದುರಿಸುವಂತಾಗಿದ್ದು, ಇದೇ ಮಾರ್ಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದರಿಂದ ನಾಯಿಗಳು ಕಚ್ಚುವ ಸಾಧ್ಯತೆಗಳಿವೆ. ಇದು ನಿಲ್ಲಬೇಕು.
-ನಾರಾಯಣಸ್ವಾಮಿ, ಗ್ರಾಮಸ್ಥ

ತ್ಯಾಜ್ಯ ಸುರಿಯುತ್ತಿರುವ ವಿಚಾರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ತ್ಯಾಜ್ಯ ಸುರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಯಾರು ಸುರಿಯುತ್ತಿದ್ದಾರೆ ಎಂಬುದನ್ನು ತಿಳಿದುಕೊಮಡು ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ತ್ಯಾಜ್ಯವನ್ನು ಯಾರೇ ಸುರಿದರೂ ಸರಿ ಅವರಿಗೆ ಮೊದಲು ನೋಟಿಸ್‌ ನೀಡುತ್ತೇನೆ. ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ.
-ಆದರ್ಶ್‌ ಕುಮಾರ್‌, ಕುಂದಾಣ ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next