ಸೂರತ್: ಕಲುಷಿತ ನೀರನ್ನು ಸೇವಿಸಿ ಆರು ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಗುಜರಾತ್ ನ ಸೂರತ್ ನ ಕತೂರ್ ಗ್ರಾಮದಲ್ಲಿ ನಡೆದಿದೆ.
ಮೇ.30 ಮತ್ತು 31ರಂದು ಈ ಘಟನೆ ನಡೆದಿದೆ. ಗ್ರಾಮಸ್ಥರು ವಾಂತಿ ಮತ್ತು ಅತಿಸಾರದಂತಹ ರೋಗಲಕ್ಷಣಗಳಿಂದ ಬಳಲುತ್ತಿದ್ದರು. ಅಸ್ವಸ್ಥ ಗ್ರಾಮಸ್ಥರಿಗೆ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ನಗರ ಪಾಲಿಕೆ ಅಧಿಕಾರಿಗಳು ವಿವೇಕ್ ನಗರ ಕಾಲೋನಿಗೆ ತೆರಳಿ ಗ್ರಾಮಸ್ಥರಿಗೆ ಔಷಧಿ ವಿತರಿಸಿದ್ದಾರೆ.
ಸೂರತ್ ಮಹಾನಗರ ಪಾಲಿಕೆ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಸ್ಥಳೀಯ ಮುಖಂಡ ದರ್ಶನ ನಾಯಕ್ ಆರೋಪಿಸಿದರು. ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ದೇಶವ್ಯಾಪಿ ಏಕರೂಪದ ಬಾಡಿಗೆ ಕಾನೂನು ಜಾರಿ ಸನ್ನಿಹಿತ: ಸಚಿವ ಸಂಪುಟದ ಒಪ್ಪಿಗೆ
ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದ್ದು, ಒಳಚರಂಡಿ ನೀರಿನೊಂದಿಗೆ ಬೆರೆತುಹೋಗಿದೆ. ಇದನ್ನು ಕುಡಿದ ಗ್ರಾಮಸ್ಥರು ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ತಪಾಸಣೆಯ ಸಮಯದಲ್ಲಿ ತಿಳಿದುಬಂದಿದೆ.
ಸೂರತ್ ಮೇಯರ್ ಹೇಮಾಲಿ ವೋಘವಾಲಾ ಅವರು ಬುಧವಾರ ಪರಿಶೀಲನೆ ನಡೆಸಿದರು. ಮೃತರ ರಕ್ತಸಂಬಂಧಿಗಳಿಗೆ ಒಂದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.