ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಮೋಟಾರ್ ದುರಸ್ತಿಗೀಡಾಗಿದ್ದು, ಕಳೆದ 20 ದಿನಗಳಿಂದ ಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಜೀವಜಲಕ್ಕಾಗಿ ತತ್ತರಿಸುವಂತಾಗಿದೆ.
ಕೃಷ್ಣಾ ನದಿಯಿಂದ ಪಟ್ಟಣಕ್ಕೆ ನೀರು ಪಂಪ್ ಮಾಡುವ ಮೋಟಾರ್ ಸುಟ್ಟುಹೋಗಿದ್ದು ರಿಪೇರಿ ಮಾಡಿಸುವವರೇ ಇಲ್ಲದಂತಾಗಿದೆ. ಈ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಖಾಸಗಿ ಏಜೆನ್ಸಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು. ಅವರ ಅವಧಿ ಮುಗಿದಿದ್ದು, ಈಗ ನಿರ್ವಹಣೆ ಮಾಡುವವರೆ ಇಲ್ಲದಂತಾಗಿದೆ.
ಪರಿಣಾಮ ಪೈದೊಡ್ಡಿ, ಗುರುಗುಂಟಾ, ಹಟ್ಟಿ, ಕೋಠಾ ಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಸಮಸ್ಯೆ ತಲೆದೋರಿದೆ.
ಪರ್ಯಾಯ ಮಾರ್ಗ: ಹಟ್ಟಿ ಪಟ್ಟಣದ ಜನತೆ ನೀರಿನ ಸಮಸ್ಯೆಯಿಂದ ರೋಸಿ ಹೋಗಿ ಪ್ರತಿಭಟಿಸಿದಾಗ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಿಕೊಂಡಿದ್ದರಿಂದ ಜಿಪಂ ವತಿಯಿಂದ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಹಟ್ಟಿ ಪಟ್ಟಣದ 12 ವಾರ್ಡ್‌ಗಳಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪ್ರತಿ ವಾರ್ಡಿಗೆ ಎರಡು ದಿನಕ್ಕೊಮ್ಮೆ ಒಂದೇ ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಇದು ಸಾಲುತ್ತಿಲ್ಲ. ನೀರಿನ ಅಭಾವದಿಂದ ನಿವಾಸಿಗಳು ಕ್ಯಾಂಪಿನ ಪೊಲೀಸ್ ಠಾಣೆ, ಲಿಂಗಾವಧೂತ ದೇವಸ್ಥಾನದ ನಲ್ಲಿಗಳಲ್ಲಿ ಮುಗಿಬಿದ್ದು ಅಹೋರಾತ್ರಿ ನೀರು ತರುವಂತಾಗಿದೆ. ಸಮಸ್ಯೆಗಳನ್ನು ನಿಭಾಯಿಸಬೇಕಾದ ಗ್ರಾಮ ಪಂಚಾಯ್ತಿ ಸದಸ್ಯರು ನಾಪತ್ತೆಯಾಗಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರು ನೀರಿನ ಬವಣೆ ನೀಗಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಂ.ಸಿ. ಚಂದ್ರಶೇಖರ, ಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಚಳಿಗಾಲದಲ್ಲಿ ನಡಗುತ್ತಾ ಮಧ್ಯರಾತ್ರಿಯಲ್ಲಿ ಹುಳು-ಹುಪ್ಪಡಿಗಳ ಭಯ ಭೀತಿಯಲ್ಲಿ ನೀರು ತರುವಡಾತಲ್ಕ. ಕೂಡಲೆ ಸಮಸ್ಯೆ ನಿವಾರಿಸಬೇಕು.
ಶರಣುಗೌಡ ಗುರಿಕಾರ, ಹಟ್ಟಿ ಗ್ರಾಮದ ನಿವಾಸಿ.
ಮೋಟಾರ್ ರಿಪೇರಿಗೆ ಜಿಲ್ಲಾ ಪಂಚಾಯತಿಗೆ ಪತ್ರ ಬರೆದಿದ್ದು, 1,98,000 ರೂ. ಬಿಡುಗಡೆ ಮಾಡಿದೆ. ಮೋಟಾರ್‌ನ್ನು ದುರಸ್ತಿಗಾಗಿ ಹೈದರಾಬಾದ್ ಗೆ ಕೊಂಡೊಯ್ಯಲಾಗಿದೆ. ರಿಪೇರಿಯಾದ ಕೂಡಲೇ ಅಳವಡಿಸಿ ನೀರು ಪೂರೈಸಲು ಕ್ರಮ
ವಹಿಸಲಾಗುವುದು.
ಶಂಕರಗೌಡ ಬಳಗಾನೂರು, ಅಧ್ಯಕ್ಷರು ಗ್ರಾಪಂ ಹಟಿ