Advertisement

ಪಂಚಾಯತ್‌ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆಗೆ ಗ್ರಾಮಸ್ಥರ ಮನವಿ

12:41 AM Aug 03, 2019 | Sriram |

ಪಳ್ಳಿ: ಕಾಂತಾವರ ಗ್ರಾ.ಪಂ.ನ ಪ್ರಥಮ ಹಂತದ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ರಾಜೇಶ್‌ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಕಾಂತಾವರ ಕನ್ನಡ ಸಂಘದಲ್ಲಿ ನಡೆಯಿತು.

Advertisement

ಜಲವರ್ಷ ಘೋಷನೆಯಾಗಿದ್ದು ಜಲಾಮೃತ -2019 ಯೋಜನೆಯಡಿ ಹೊಸ ಕಟ್ಟಡ ನಿರ್ಮಿಸಲು ಕಟ್ಟಡ ಪರವಾನಗಿ ನೀಡಬೇಕಾದಲ್ಲಿ ಮಳೆಕೊಯ್ಲು ಕಡ್ಡಾಯವಾಗಬೇಕೆಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಆಧಾರ್‌ ತಿದ್ದುಪಡಿಗೆ ತೊಂದರೆ
ಜಿ.ಪಂ. ಸದಸ್ಯೆ ದಿವ್ಯಶ್ರೀ ಅಮೀನ್‌ ಮಾತನಾಡಿ ತಮ್ಮ ಅನುದಾನದಲ್ಲಿ ಕಾಂತಾವರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ 10 ಲ.ರೂ. ಅನುದಾನದಲ್ಲಿ ಒವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲು ಮಂಜೂರುಗೊಳಿಸಿದ್ದೇನೆ ಎಂದರು. ಆಧಾರ್‌ ತಿದ್ದುಪಡಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರ ಗಮನಕ್ಕೆ ತರಲಾಗಿದ್ದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿ ಡಾ| ಗಿರೀಶ್‌ ಮಾತನಾಡಿ ಇತ್ತೀಚೆಗೆ ಡೆಂಗ್ಯೂ ರೋಗವೂ ಜಾಸ್ತಿಯಾಗಿದ್ದು ಸೊಳ್ಳೆಗಳಿಂದ ಹರಡುವುದು, ನಿರಂತರ ಜ್ವರ ಕಂಡುಬಂದಲ್ಲಿ ತತ್‌ಕ್ಷಣ ರಕ್ತ ಪರೀಕ್ಷೆ ಕೈಗೊಳ್ಳುವಂತೆ ಸೂಚಿಸಿದರು. ಪರಿಸರದ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಎಂದರು.

ಖಾಯಂ ವೈದ್ಯರಿಗೆ ಬೇಡಿಕೆ
ಆಯುಷ್ಮಾನ್‌ ಭಾರತ್‌ ಯೋಜನೆಯ ಬಗ್ಗೆ ಗೊಂದಲವಿದ್ದು ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ಮೋಹನ್‌ ಅಡ್ಯಂತಾಯ ಸಭೆಯ ಗಮನ ಸೆಳೆದರು. ಕಾಂತಾವರ ಗ್ರಾಮಕ್ಕೆ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಖಾಯಂ ವೈದ್ಯರ ಅವಶ್ಯಕತೆ ಇದೆ. ತುರ್ತು ಚಿಕಿತ್ಸೆಗಾಗಿ ಕಡೆ ಪಕ್ಷ ಖಾಯಂ ಹಿರಿಯ ಆರೋಗ್ಯ ಸಹಾಯಕಿಯನ್ನಾದರೂ ನೇಮಿಸಿ ಎಂದು ಸುಧಾಕರ್‌ ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾ ಪಂಚಾಯತ್‌ ಸದಸ್ಯೆ ದಿವ್ಯಶ್ರೀ ತತ್‌ಕ್ಷಣ ತಾಲೂಕು ಆರೋಗ್ಯಾಧಿಕಾರಿಗಳಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

ಪರಿಹಾರವಾಗದ ಹಕ್ಕು ಪತ್ರ ಸಮಸ್ಯೆ
ಆಧಾರ್‌ ತಿದ್ದುಪಡಿಯಲ್ಲಿ ಗೊಂದಲ ದ್ದು ವಾಸ್ತವ್ಯ ದೃಢ ಪತ್ರ ಯಾರೂ ನೀಡಬೇಕೆಂಬುದನ್ನು ಸ್ಪಷ್ಟವಾಗಿ ಸಭೆಗೆ ತಿಳಿಸಿ ನಮಗೆ ಬಂದ ಮಾಹಿತಿಯ ಪ್ರಕಾರ ತಹಾಶೀಲ್ದಾರ್‌ ನೀಡುವುದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾ.ಪಂ. ಸದಸ್ಯ ಜಯ ಕೋಟ್ಯಾನ್‌ ಗಮನ ಸೆಳೆದರು. ಈ ಬಗ್ಗೆ ಉತ್ತರಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಈ ಹಿಂದೆ ಗ್ರಾ.ಪಂ. ಅಧ್ಯಕ್ಷರೇ ವಾಸ್ತವ್ಯ ದೃಢೀಕರಣ ಪತ್ರವನ್ನು ನೀಡುತ್ತಿದ್ದು ಆದರೆ ಸರಕಾರದ ಸುತ್ತೋಲೆಯಂತೆ ತಹಶೀಲ್ದಾರ್‌ ನೀಡಬೇಕಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಸರಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು.

ಸುಮಾರು 45ವರ್ಷಗಳಿಂದ ಮನೆ ಕಟ್ಟಿ ಕುಳಿತ್ತಿದ್ದರೂ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ ಎಂದು ಗ್ರಾಮಸ್ಥರಾದ ಚಂದ್ರಶೇಖರ್‌ ತಮ್ಮ ಅಳಲನ್ನು ತೋಡಿಕೊಂಡರು. ಈ ಬಗ್ಗೆ ಉತ್ತರಿಸಿದ ಕಂದಾಯ ಅಧಿಕಾರಿ ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದ ಹಕ್ಕು ಪತ್ರ ನೀಡಲು ವಿಳಂಬವಾಗುತ್ತಿದೆ ಈ ಬಗ್ಗೆ ಸರಕಾರದ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಬೇಕು ಬಳಿಕವಷ್ಟೇ ಹಕ್ಕು ಪತ್ರ ನೀಡಬಹುದು ಎಂದರು.

ಶಿಕ್ಷಣ ಇಲಾಖೆ
ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 60ಕ್ಕೂ ಅಧಿಕ ಮಕ್ಕಳಿದ್ದು ಖಾಯಂ ಶಿಕ್ಷಕರು ಇಲ್ಲ. ಪ್ರಭಾರವಾಗಿ ನೇಮಿಸಿದ ಶಿಕ್ಷಕರು ಬರುತ್ತಿಲ್ಲ ಹಾಗಾಗಿ ಹತ್ತಿರದ ಬೇಲಾಡಿ ಅಥವಾ ಮದಗ ಶಾಲೆಯ ಶಿಕ್ಷಕರನ್ನು ಪ್ರಭಾರವಾಗಿ ನೇಮಿಸಿ ಎಂದು ಗ್ರಾ. ಪಂ. ಸದಸ್ಯ ಜಯ ಕೋಟ್ಯಾನ್‌ ಜಿ. ಪಂ. ಸದಸ್ಯರ ಗಮನ ಸೆಳೆದರು.

ತಾಂತ್ರಿಕ ತೊಂದರೆ
ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಹಾಗೂ ಬೆರಳಚ್ಚು ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದಿನಕ್ಕೆ 2 ರಿಂದ 3 ಜನರಿಗೆ ಪಡಿತರ ನೀಡುವಂತಾಗಿದೆ. ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗೆ ಬಂದು ಬರಿಗೈಯಲ್ಲಿ ವಾಪಾಸ್ಸಾಗುವಂತಾಗಿದೆ ಎಂದು ಮೋಹನ್‌ ಅಡ್ಯಂತಾಯ ಆಗ್ರಹಿಸಿದರು.

ಮೆಸ್ಕಾಂ ಇಲಾಖೆ
ವಿದ್ಯುತ್‌ ಬಿಲ್ ಪಾವತಿ ಕೇಂದ್ರವನ್ನು ತಿಂಗಳ 22ನೇ ತಾರೀಕಿನಂದು ಕಾಂತಾ ವರದಲ್ಲಿ ಪಡೆಯಲಾಗುತ್ತಿತ್ತು.ಆದರೆ ಅದನ್ನು ಸ್ಥಗಿತಗೊಳಿಸುವ ಬಗ್ಗೆ ಮಾಹಿತಿ ಇದೆ. ಇದರಿಂದ ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ತೆರಳಬೇಕಾಗುತ್ತದೆ ಅಲ್ಲದೇ ಮೊಬೈಲ್ನಲ್ಲಿ ಪಾವತಿಸಲು ನೆಟ್ವರ್ಕ್‌ ಸಮಸ್ಯೆ ಹಾಗಾಗಿ ವಿದ್ಯುತ್‌ ಬಿಲ್ ಪಾವತಿ ಕೇಂದ್ರವನ್ನು ಮುಂದುವರಿಸುವಂತೆ ಗ್ರಾಮಸ್ಥರು ವಿನಂತಿಸಿದರು. ಈ ಬಗ್ಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸುಧೀಂದ್ರ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಪಶುವೈದ್ಯಕೀಯ ಕೇಂದ್ರಕ್ಕೆ ಆಗ್ರಹ
ಕಾಂತಾವರ ಗ್ರಾಮದಲ್ಲಿ 2 ಹಾಲು ಉತ್ಪಾದಕ ಕೇಂದ್ರವಿದ್ದು ಪಶು ಚಿಕಿತ್ಸಾಲಯ ಇಲ್ಲದೇ ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ ಹಾಗಾಗಿ ಕಾಂತಾವರ ಗ್ರಾಮಕ್ಕೆ ಪಶುಚಿಕಿತ್ಸಾಲಯ ನಿರ್ಮಿಸು ವಂತೆ ಜಗನ್ನಾಥ ಶೆಟ್ಟಿ ಬೇಲಾಡಿ ಆಗ್ರಹಿಸಿದರು.

ಸ್ಥಳೀಯರು ಹತ್ತಿರದ ಬೋಳ, ನಿಟ್ಟೆ, ಸಾಣೂರು ಮೊದಲಾದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಸಂಪರ್ಕಿಸಿದರೂ ತುರ್ತು ಸಮಯಕ್ಕೆ ವೈದ್ಯರು ಲಭ್ಯವಿರುವುದಿಲ್ಲ ಎಂದು ಮೋಹನ್‌ ಅಡ್ಯಂತಾಯ ಸಭೆಯ ಗಮನ ಸೆಳೆದರು.

ಈ ಬಗ್ಗೆ ಉತ್ತರಿಸಿದ ಪಂ.ಅಭಿವೃದ್ಧಿ ಅಧಿಕಾರಿ ಶಾಸಕರ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ವಾರಕ್ಕೆ ಒಂದು ದಿನ ಸಂಚಾರಿ ಚಿಕಿತ್ಸಾ ಘಟಕ ಕರ್ತವ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು ಸದುಪಯೋಗಿಸಬೇಕು ಎಂದರು.

ವಿವಿಧ ಇಲಾಖೆಗಳಾದ ಆರೋಗ್ಯ ಇಲಾಖೆಯ ಡಾ| ಗಿರೀಶ್‌, ಗ್ರಾಮೀಣ ಆರ್ಯುವೇದ ಇಲಾಖೆಯ ಸಂಧ್ಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜೇಶ್ವರೀ, ಕಂದಾಯ ಇಲಾಖೆಯ ರವಿಚಂದ್ರ ಪಾಟೀಲ್, ಅರಣ್ಯ ಇಲಾಖೆ ವಿನಾಯಕ್‌, ಆರಕ್ಷಕ ಠಾಣೆಯ ರಘು, ಮೆಸ್ಕಾಂ ಇಲಾಖೆಯ ಸುಧೀಂದ್ರ, ವಿವಿಧ ಇಲಾಖೆಗಳ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ವಿಜಯ್‌ ಕುಮಾರ್‌ ಭಾಗವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ.ಸದಸ್ಯರಾದ ಪ್ರವೀಣ್‌ ಕೋಟ್ಯಾನ್‌, ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಾ, ಗ್ರಾ.ಪಂ.ಸದಸ್ಯರಾದ ಜಯ ಎಸ್‌. ಕೋಟ್ಯಾನ್‌, ಸಂದೀಪ್‌ ಅಡ್ಯಂತಾಯ, ಶಕುಂತಳಾ ಶೆಟ್ಟಿ, ಗಾಯತ್ರಿ ಭಟ್, ಶ್ವೇತಾ ನಾಯ್ಕ, ರೇಖಾ, ಜಗದೀಶ್‌ ಮೂಲ್ಯ, ಉಪಸ್ಥಿತರಿದ್ದರು.

ವರದಿಯನ್ನು ಮಂಜುನಾಥ್‌ ಮಂಡಿಸಿದರು, ಜಮಾ ಖರ್ಚನ್ನು ಕಾರ್ಯದರ್ಶಿ ಜಯಕರ್‌ ವಾಚಿಸಿದರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಂಚಾಯತ್‌ ಸಿಬಂದಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next