Advertisement

ಹಾಲಾಡಿ, ಅಮಾಸೆಬೈಲು, ಸುಳ್ಯಪದವಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ

01:34 AM Apr 17, 2022 | Team Udayavani |

ಸುಳ್ಯಪದವು: ಕೇರಳ ಸರಕಾರವು ಗಡಿಭಾಗವಾಗಿರುವ ನೆಟ್ಟಣಿಗೆ ಮುಟ್ನೂರು ಗ್ರಾಮದ ಮಿಂಚಿಪದವಿನಲ್ಲಿ ಬಾವಿಯೊಳಗೆ ಹೂತಿಟ್ಟಿದೆ ಎನ್ನಲಾಗಿರುವ ಮಾರಕ ಎಂಡೋಸಲ್ಫಾನ್‌ ಅನ್ನು ತೆರವುಗೊಳಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಭರವಸೆ ನೀಡಿದರು.

Advertisement

ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ದ.ಕ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಅಧ್ಯಕ್ಷ ರಮೇಶ್‌ ರೈ ಸಾಂತ್ಯ, ಪಿಡಿಒ ಸಂದೇಶ ಕೆ.ಎನ್‌., ಸದಸ್ಯರಾದ ಶ್ರೀರಾಮ ಪಕ್ಕಳ, ಇಬ್ರಾಹಿಂ ಕೆ. ಅವರು ಪಂಚಾಯತ್‌ ಅಭಿವೃದ್ಧಿಯ ಬಗ್ಗೆ ಹಾಗೂ ಎಂಡೋಸಲ್ಫಾನ್‌ ಬಗ್ಗೆ ಇತರ ವಿಷಯಗಳನ್ನು ಪ್ರಸ್ತಾವಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ವಾರದೊಳಗೆ ನೆಟ್ಟಣಿಗೆ ಮುಟ್ನೂರು ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಎಂಡೋಸಲ್ಫಾನ್‌ನ ಬಗ್ಗೆ ಪಂಚಾಯತ್‌ಗೆ ಭೇಟಿ ನೀಡಿ ಚರ್ಚಿಸುತ್ತೇನೆ. ಎಂಡೋ ಕೀಟನಾಶಕ ಸುರಿದ ಪ್ರದೇಶಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ನೆಟ್ಟಣಿಗೆ ಮುಟ್ನೂರು ಗ್ರಾಮದಲ್ಲಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ಆಗುತ್ತಿತ್ತು. ಈಗ ಅರಣ್ಯ ಇಲಾಖೆಯ ಅಡ್ಡಿಯಿಂದ ದೊರೆಯುತ್ತಿಲ್ಲ ಎಂದು ರೈತ ಸಂಘದವರು ಜಿಲ್ಲಾ ಧಿಕಾರಿ ಅವರ ಗಮನಕ್ಕೆ ತಂದರು. ಅರಣ್ಯ, ಕಂದಾಯ ಇಲಾಖೆಗಳು ಜಂಟಿ ಸರ್ವೇ ಮಾಡಿ ಕಂದಾಯ, ಅರಣ್ಯ ಭೂಮಿಯನ್ನು
ಪ್ರತ್ಯೇಕಿಸಿ ಕಡತ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶಾಸಕರ ಸೂಚನೆ
ಹಲವು ಗ್ರಾಮಗಳಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಜಂಟಿ ಸರ್ವೇ ಮಾಡಿ ಕಂದಾಯ, ಅರಣ್ಯ ಭೂಮಿ ಬೇರ್ಪಡಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಗ್ರಾಮಸ್ಥರಿಂದ 160ಕ್ಕಿಂತ ಹೆಚ್ಚು ಲಿಖಿತ ಅರ್ಜಿಗಳು ಬಂದಿದ್ದವು. ಮೌಖಿಕವಾಗಿಯೂ ಕೆಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಬಳಿ ಗ್ರಾಮಸ್ಥರು ಮಂಡಿಸಿದರು.

ಸಮಸ್ಯೆ ಆಲಿಸಿ ಅಹವಾಲು ಸ್ವೀಕಾರ
ಕುಂದಾಪುರ/ಸಿದ್ದಾಪುರ: ಅಮಾಸೆಬೈಲು ಗ್ರಾಮದ ಹಲವೆಡೆಗಳಲ್ಲಿ ಮೊಬೈಲ್‌ ಸಂಪರ್ಕ ಸಮಸ್ಯೆಯಿದೆ. ಹಳ್ಳಿಗಳ ರಸ್ತೆಗಳು ಅಭಿವೃದ್ಧಿಯಾಗಿಲ್ಲ, ಮೀಸಲು ಅರಣ್ಯ ಕಾಯ್ದೆಯಿಂದ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ, ಕಾಡು ಪ್ರಾಣಿಗಳಿಂದ ಕೃಷಿಗೆ ಸಮಸ್ಯೆಯಾಗುತ್ತಿದೆ, ಬೇಸಗೆಯಲ್ಲಿ ನೀರಿನ ಕೊರತೆ ಸಹಿತ ಹಾಲಾಡಿ ಹಾಗೂ ಅಮಾಸೆಬೈಲು ಗ್ರಾಮಸ್ಥರಿಂದ ಹತ್ತಾರು ಅಹವಾಲುಗಳು ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದವು.

“ಜಿಲ್ಲಾಧಿಕಾರಿಗಳ ನಡೆ – ಹಳ್ಳಿಗಳ ಕಡೆಗೆ’ ಅಭಿಯಾನದ ಅಂಗವಾಗಿ ಹಾಲಾಡಿ ಹಾಗೂ ಅಮಾಸೆಬೈಲು ಗ್ರಾಮ ದಲ್ಲಿ ಆಯೋಜಿಸಿದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅವರು ಹಾಲಾಡಿಯ ಶಾಲಿನಿ ಜಿ. ಶಂಕರ್‌ ಕನ್ವೆನ್ಶನ್‌ ಸೆಂಟರ್‌ ಹಾಗೂ ಅಮಾಸೆಬೈಲಿನ ಶ್ಯಾಮಿಹಕ್ಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.

ಮಚ್ಚಟ್ಟು ಗ್ರಾಮಕ್ಕೆ ಬಸ್‌ ಬರದೆ ತೊಂದರೆ ಯಾಗುತ್ತಿರುವುದು, ತೊಂಬಟ್ಟು ರಸ್ತೆ ಅಭಿವೃದ್ಧಿಗೆ ಡೀಮ್ಡ್ ಫಾರೆಸ್ಟ್‌ ಅಡ್ಡಿಯಾಗಿರುವುದು, ಲಿಂಗತ್ವ ಅಲ್ಪಸಂಖ್ಯಾಕರು ನಿವೇಶನ ಹಾಗೂ ಮತದಾನದ ಹಕ್ಕು ನೀಡಬೇಕು ಎನ್ನುವ ಬೇಡಿಕೆಗಳು ಇತ್ಯರ್ಥಕ್ಕೆ ಡಿಸಿಯವರಿಗೆ ಸಲ್ಲಿಸಲಾಯಿತು.

30ಕ್ಕೂ ಅಧಿಕ ಅರ್ಜಿ
ಆರ್‌ಟಿಸಿ ಬದಲಾವಣೆ, ಪೋಡಿ ಮಾಡದಿರುವ ಬಗ್ಗೆ ಸೇರಿದಂತೆ 30ಕ್ಕೂ ಅಧಿಕ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ತ್ವರಿತಿಗತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ, ಹಾಲಾಡಿ ಗ್ರಾ.ಪಂ. ಅಧ್ಯಕ್ಷೆ ಸಾಧು, ಅಮಾಸೆಬೈಲಿನ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್‌ ಶೆಟ್ಟಿ, ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಕುಂದಾಪುರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್‌ ರೆಡ್ಡಿ, ಕುಂದಾಪುರ ತಹಶೀಲ್ದಾರ್‌ ಕಿರಣ್‌ ಜಿ. ಗೌರಯ್ಯ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್‌. ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳನ್ನು ಗ್ರಾಮಸ್ಥರ ಪರವಾಗಿ ಹಿರಿಯರಾದ ಎ.ಜಿ. ಕೊಡ್ಗಿ ಸಮ್ಮಾನಿಸಿದರು.

ಮಳೆಯಿಂದಾಗಿ ಅಡ್ಡಿ
ಅಮಾಸೆಬೈಲಿನ ಶ್ಯಾಮಿಹಕ್ಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಮಳೆಯಿಂದಾಗಿ ಅಲ್ಲಿಂದ ದೇವಸ್ಥಾನಕ್ಕೆ ಸ್ಥಳಾಂತರ ಮಾಡಬೇಕಾಯಿತು. ಅಲ್ಲಿಯೂ ಬೆಳಕಿನ ವ್ಯವಸ್ಥೆ, ಇನ್ನಿತರ ಕಾರಣಗಳಿಂದ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಾರ್ಯಕ್ರಮದ ಬಳಿಕ ರಾತ್ರಿ ಅಮಾಸೆಬೈಲಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ ಹೂಡಿದರು.

ಸುದಿನ ವರದಿ
ಅಮಾಸೆಬೈಲಿನ ಮೊಬೈಲ್‌ ಸಂಪರ್ಕ ಸಮಸ್ಯೆ, ಹಕ್ಕುಪತ್ರ, ನೀರಿನ ಸಮಸ್ಯೆ ಕುರಿತಂತೆ “ಉದಯವಾಣಿ ಸುದಿನ’ವು ಎ. 15ರಂದು ವಿಶೇಷ ವರದಿ ಪ್ರಕಟಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next