ಸೇಡಂ: ಪಟ್ಟಣದ ವಿದ್ಯಾನಗರ, ಗಣೇಶ ನಗರ, ಊಡಗಿ ರಸ್ತೆ, ವಿವೇಕಾನಂದ ಶಾಲೆ ಹಿಂಭಾಗ, ಭವಾನಿ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿನ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಜನ, ಜಾನುವಾರು ಸರ್ಕಸ್ ಮಾಡಿ ರಸ್ತೆ ದಾಟುವಂತ ದುಸ್ಥಿತಿ ಎದುರಾಗಿದೆ.
ವಿದ್ಯಾನಗರ ರಸ್ತೆ ಮೂಲಕ ಮಾತೃಛಾಯಾ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕನ್ಯಾ ಪ್ರೌಢಶಾಲೆ, ವಿಧಾನಸೌಧ, ತಾಲೂಕು ಕ್ರೀಡಾಂಗಣ ಸೇರಿದಂತೆ ಅನೇಕ ಕಡೆಗಳಲ್ಲಿ ಜನ ಸಂಚರಿಸುತ್ತಾರೆ. ಆದರೆ ಹಲವಾರು ವರ್ಷಗಳೇ ಕಳೆದರೂ ರಸ್ತೆ ಸುಧಾರಣೆಯಾಗದೆ ಹದಗೆಟ್ಟು ನಿಂತಿದೆ.
ಪ್ರಜ್ಞಾವಂತರ ಬಡಾವಣೆಯಂದೇ ಖ್ಯಾತಿಯಾದ ವಿದ್ಯಾನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪರಿಸ್ಥಿತಿಯೇ ಹೀಗಾದಲ್ಲಿ ಮುಂದೇನು ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತವರಲ್ಲಿರುವ ವಿದ್ಯಾನಗರ ರಸ್ತೆ ಮಾತ್ರ ಇಂದಿಗೂ ದುರಸ್ತಿ ಕಾಣದೆ ಕಂಗೆಟ್ಟು ನಿಂತಿದೆ.
ಅಲ್ಲದೇ ಇನ್ನುಳಿದ ಅನೇಕ ಬಡಾವಣೆಗಳಲ್ಲಿನ ಜನರಿಗೆ ಸೂಕ್ತ ರಸ್ತೆಯಿಲ್ಲ. ಒಂದೆಡೆ ರಸ್ತೆ ಇದ್ದರೆ, ಇನ್ನೊಂದೆಡೆ ಇಲ್ಲ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಮಹಿಳೆಯರು, ಮಕ್ಕಳು ಸರ್ಕಸ್ ಮಾಡಿ ರಸ್ತೆ ದಾಟುವಂತಾಗಿದೆ. ಇದರಿಂದ ಸಂಚಾರಿಗಳು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
•ಶಿವಕುಮಾರ ಸೇಡಂ