Advertisement

ಸಿಟಿ ಲೈಫ್ ನಲ್ಲಿ ಹಳ್ಳಿ ಸೊಬಗಿನ ಹುಡುಕಾಟ!

02:04 PM Jul 18, 2021 | Team Udayavani |

ಬೆಚ್ಚನೆಯ ಮಾಳಿಗೆ ಮನೆ. ತಣ್ಣನೆಯ ಹೆಂಚಿನ ಮನೆ, ಧಾನ್ಯಗಳ ತುಂಬುವ ಕಣಜ, ಹಿತ್ತಲಲ್ಲಿ ಪರದೆಯಿಂದ ಕಟ್ಟಿದ ಬಚ್ಚಲಮನೆ. ಬೆಳಕಿಗಾಗಿ ಬಿಟ್ಟುಕೊಂಡ ಕಿಂಡಿಗಳು, ಸೋರುವ ಮಳೆ ನೀರನ್ನು ಸಂಗ್ರಹಿಸಲು ಇಟ್ಟ ಮಡಿಕೆಗಳು. ಪೂಜಾ ಮನೆಯಲ್ಲಿ ನಿಲ್ಲಿಸಿದ ದೇವರ ಕಂಬ, ಆಕಾರವೇ ಇಲ್ಲದ ಕನ್ನಡಿಗಳು, ಬಟ್ಟೆಗಳನ್ನು ತುಂಬಲು ಮಾಡಿದ ಪಂಜರಗಳು, ಮನೆ ಮುಂದಿನ ತುಳಸಿಗಿಡ, ಅದರ ಸುತ್ತಲಿನ ಹೂದೋಟ, ಅಟ್ಟದಲ್ಲಿ ನೇತುಹಾಕಿದ ಪೊರಕೆ, ಈರುಳ್ಳಿ-ಬೆಳ್ಳುಳ್ಳಿ ಗೊಂಚಲುಗಳು, ಕೊಟ್ಟಿಗೆಯಲ್ಲಿ ಆಡುವ ಜಾನುವಾರುಗಳು, ಊರ ಹೊರಗಿನ ಕೆರೆಗಳು, ಈಚಲ ಮರ, ಊರನ್ನೇ ಸುತ್ತುವರಿದ ಬಿಟ್ಟ-ಗುಡ್ಡಗಳು, ಇನ್ನೇನು ಬೀಳಲಿರುವ ಸರಕಾರಿ ಶಾಲೆ, ಹಾಲಿನ ಡೈರಿ, ಪಶು ಆಸ್ಪತ್ರೆ, ಟೀ ಅಂಗಡಿಗಳು, ವರ್ಷಕ್ಕೊಮ್ಮೆ ಊರಿಗೆ ಊರೇ ಸೇರಿ ಹರಿ ಸೇವೆ ಮಾಡುವ ದೇವರ ಬಯಲು, ಚಿಕ್ಕ ಮಕ್ಕಳ ಕೈಯಲ್ಲಿನ ಮಳೆರಾಯ ಮೂರ್ತಿ, ಹಸಿವಿನ ಚಪಲ ತೀರಿಸುತ್ತಿದ್ದ ಬಳಪಗಳು.

Advertisement

ಅಬ್ಬಬ್ಟಾ… ಇದು ಹೊರನೋಟವಷ್ಟೇ! ಒಂದು ಹಳ್ಳಿ ಎಂದರೆ ಅದೊಂದು ಅನಂತ ಸಾಗರವಿದ್ದಂತೆ. ಒಂದೊಂದು ಹಳ್ಳಿಯ ಬಗ್ಗೆ ಒಂದೊಂದು ಬೃಹತ್‌ ಗ್ರಂಥವನ್ನೇ ಬರೆದಿಡಬಹುದು. ಅಷ್ಟೊಂದು ವಿಷಯಗಳಿವೆ. ಮಾತಿನಲ್ಲಿ ಅಥವಾ ಬರಹಗಳಲ್ಲಿ ಹಳ್ಳಿಯ ಸೊಬಗನ್ನು ಹಿಡಿದಿಡುವುದು ತುಂಬಾನೆ ಕಷ್ಟ. ಆ ಪ್ರಕೃತಿ ಸೌಂದರ್ಯವನ್ನು ಸವಿಯಲು ಎರಡು ಕಣ್ಣೂ ಸಾಲದು.

ನಮ್ಮದು ಹಳ್ಳಿಗಳ ದೇಶವಾದರೂ ಇತ್ತೀಚೆಗೆ ಎಲ್ಲರೂ ದುಡಿಮೆಗೆಂದು ನಗರಕ್ಕೆ ಬಂದವರು ಅಲ್ಲೇ ಬದುಕು ಕಟ್ಟಿಕೊಂಡರು. ಊರಿನಲ್ಲಿದ್ದ ಅಲ್ಪ-ಸ್ವಲ್ಪ ಜಮೀನನ್ನು ಮಾರಿ, ನಗರಗಳಲ್ಲಿ ವ್ಯಾಪಾರ ಶುರುಮಾಡಿಕೊಂಡರು. ಅವರ ಮಕ್ಕಳು ಅಲ್ಲೇ ಹುಟ್ಟಿ, ಅಲ್ಲೇ ಬೆಳೆದು, ಓದಿ, ಕೆಲಸ ತೆಗೆದುಕೊಂಡು, ಮದ್ವೆ-ಹೆಂಡತಿ-ಮಕ್ಕಳು-ಸಂಸಾರ ಅಂತ ಮಾಡಿಕೊಂಡು, ಅವರ ಮಕ್ಕಳಿಗೂ ಹಳ್ಳಿ ತೋರಿಸುವುದನ್ನೇ ಮರೆತರು. ಈಗ ಆ ಮಕ್ಕಳು ದೊಡ್ಡವರಾಗಿದ್ದಾರೆ. ಒಳಕಲ್ಲು, ಗುಂಡುಕಲ್ಲು, ಒನಕೆ, ಪಂಜರ, ಗೊಟ್ಟ ಎಂಬ ಪದಗಳು ಕಿವಿಗೆ ಬಿದ್ದರೆ, ಏನು? ಎಂದು ಮರು ಪ್ರಶ್ನೆ ಮಾಡುತ್ತಾ ಉತ್ತರಕ್ಕಾಗಿ ಕಿವಿ ನಿಮಿರಿಸಿ ನಿಲ್ಲುತ್ತಾರೆ. ಅದಾಗಿಯೂ ನಾವು ಹೇಳುವ ಉತ್ತರಕ್ಕೆ ಸರಿಯಾದ ಕಲ್ಪನೆ ಅವರ ತಲೆಯಲ್ಲಿ ಮೂಡದೆ, ಅದನ್ನು ಅಲ್ಲಿಗೆ ಬಿಟ್ಟು ಸುಮ್ಮನಾಗುತ್ತಾರೆ. ಕಾನ್ವೆಂಟ್‌ ಪಾಲಾಗಿ, ನಾಲ್ಕು ಗೌಡೆಯ ಮಧ್ಯೆ ಆನ್‌ಲೈನ್‌ ತರಗತಿಗಳಲ್ಲಿಯೇ ಮುಳುಗಿಹೋಗಿರುವ ಇತ್ತೀಚಿನ ದಿನಗಳ ಮಕ್ಕಳಿಗಾಗಿ ಮುಂದೊಂದು ದಿನ ಆನೆ, ಕಪ್ಪೆ, ಹಾವು, ಹಲ್ಲಿಗಳ ಬಗ್ಗೆ ತಿಳಿಸಲು ಪಠ್ಯವನ್ನೇ ಇಡಬೇಕಾಗುತ್ತದೆ. ಎಲ್ಲಿಗೆ ಬಂತು..? ಯಾರಿಗೆ ಬಂತು? ಸ್ವಾತಂತ್ರ್ಯ! ಅನ್ನೋ ಮಾತಿನಂತೆ, ತಂತ್ರಜ್ಞಾನ ಹಾಗೂ ನಗರೀಕರಣಗಳಿಂದ ನಮಗಾದ ಪ್ರಯೋಜನಗಳೇನು ಎಂದು ನಾವೇ ಕೂತು ಯೋಚಿಸಬೇಕಾಗುತ್ತದೆ. ಹಳ್ಳಿ ಬಿಟ್ಟು ಬಂದು ಚೆನ್ನಾಗಿ ದುಡಿದು, ಸಂಸಾರ ಕಟ್ಟಿಕೊಂಡರೂ. ಹಳ್ಳಿಯಲ್ಲಿ ಬೆವರು ಸುರಿಸಿ, ಹೊಟ್ಟೆ ತುಂಬಾ ತಿಂದು, ಆರಾಮಾಗಿ ಮಲಗುತ್ತಿದ್ದ ದಿನಗಳು ಎಂದಿಗೂ ವಾಪಾಸಾಗುವುದಿಲ್ಲ. ಹಳ್ಳಿ ಜಮೀನುಗಳನ್ನೆಲ್ಲ ಮಾರಿದರು, ಮರಗಳನ್ನೆಲ್ಲ ನೆಲಸಮ ಮಾಡಿ, ದೊಡ್ಡ ದೊಡ್ಡ ಹೊಗೆ ಕಾರುವ ಬಿಲ್ಡಿಂಗ್‌ಗಳನ್ನು ಆಕಾಶದೆತ್ತರಕ್ಕೆ ಕಟ್ಟಿದರು. ಅಲ್ಲಿ ಎಲ್ಲಿಂದಲೋ ಬಂದವರು ಕೆಲಸ ಗಿಟ್ಟಿಸಿಕೊಂಡರು. ಮರಗಿಡಗಳಿಲ್ಲದೆ, ಹೊಗೆ ತುಂಬಿ, ನೀರು ಖಾಲಿಯಾಗಿ ಪ್ಲಾಸ್ಟಿಕ್‌ ನಿಂದ ಊರಿಗೆ ಊರೇ ಶ್ಮಶಾನವಾಯ್ತು. ಹೀಗೇ ಎಲ್ಲ ಹಳ್ಳಿಗಳು ಒಂದೊಂದೇ ನಗರದ ರೂಪ ಪಡೆಯುತ್ತಾ ಬಂದವು. ಪ್ರಕೃತಿ ಮಾತೆಯೂ ಎಷ್ಟೆಂದು ತಾಳ್ಮೆಯಿಂದ ಇರುತ್ತಾಳೆ ಹೇಳಿ? ಇಲ್ಲದ ರೋಗಗಳನ್ನು ಕೊಟ್ಟು, ಉಸಿರನ್ನೇ ನಿಲ್ಲಿಸಿದಳು. ಈಗ ನೀವೆಲ್ಲರೂ ಅದೇ ಸ್ಥಿತಿಯಲ್ಲಿದ್ದೇವೆ. ಮೊದಲು ತಿನ್ನಲು ಅಲೆದಾಡುತ್ತಿದ್ದೆವು, ಅನಂತರ ಬದುಕಲು ಪರದಾಡುತ್ತಿದ್ದೆವು, ಈಗ ಉಸಿರಾಡಲು ಒದ್ದಾಡುತ್ತಿದ್ದೇವೆ.

ನಾವೇ ತೋಡಿಕೊಂಡ ಗುಂಡಿಗಳು ನಮ್ಮನ್ನೇ ಕೈಬೀಸಿ ಕರೆಯುತ್ತಿವೆ. ಮರಗಿಡಗಳು ಬೆಳೆಯಬೇಕಾದ ಜಾಗದಲ್ಲಿ ಮೆಟ್ರೋ ಕಂಬಗಳು ಬೆಳೆದು ನಿಂತುಬಿಟ್ಟಿವೆ. ಪ್ರಾಣಿಗಳು ಓಡಾಡುತ್ತಿದ್ದ ಜಾಗಗಳಲ್ಲಿ ಕಿರೋì.. ಎಂದು ವಾಹನಗಳು ಹಾರ್ನ್ ಮಾಡುತ್ತಾ ಮೈಮೇಲೆ ಹರಿಯಲು ಬರುತ್ತಿವೆ. ನದಿಗಳೆಲ್ಲ ಚರಂಡಿಗಳಾಗಿವೆ. ಕೆರೆಗಳೆಲ್ಲ ಮೈದಾನಗಳಾಗಿ ಅನಂತರ ಅಪಾರ್ಟ್‌ಮೆಂಟ್‌ಗಳಾಗಿವೆ. ಸರಕಾರಿ ಶಾಲಾ-ಕಾಲೇಜುಗಳು ಮುಚ್ಚುತ್ತಿವೆ. ರಸ್ತೆಗಳು ಅಗಲವಾದಷ್ಟೂ ವಾಹನಗಳು ತುಂಬುತ್ತಿವೆ. ಎಲ್ಲ ಜಾಗವು ಭರ್ತಿಯಾಗಿದೆ. ಭೂಮಿ ತಾಯಿ ಗರ್ಭವತಿಯಾಗಿರಬೇಕು. ಹೊಟ್ಟೆಯೊಳಗೆ ಕಿಚ್ಚು ಜಾಸ್ತಿಯಾಗಿ ಹೆರಿಗೆ ನೋವು ಹೆಚ್ಚಾಗುವ ಮೊದಲು, ಹೊಟ್ಟೆ ತಣ್ಣಗಿರುವಂತೆ ನೋಡಿಕೊಂಡು ಸುಂದರ ಮಗುವಿನ ಸರಾಗ ಹೆರಿಗೆಗಾಗಿ ನಾವೆಲ್ಲ ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಒಂದರಿಂದ ಎರಡು, ಎರಡರಿಂದ ನಾಲ್ಕು ಎಂಬಂತೆ ಮಲಿನದ ವಿಷ ಎಲ್ಲರನ್ನೂ ಆಕ್ರಮಿಸುತ್ತಾ, ಒಬ್ಬೊಬ್ಬರನ್ನೇ ಸುಡುತ್ತಾಹೋಗುತ್ತದೆ.

ಕೊರೊನಾ ಬಂದು ಕೆಲವರಿಗಾದರೂ ಬುದ್ದಿ ಬಂದಿರಲೇಬೇಕು. ಅದಕ್ಕೆ ನಗರದ ಸಹವಾಸ ಬಿಟ್ಟು, ಮತ್ತೆ ಹಳ್ಳಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಅವರ ತಾತಂದಿರೇ ಮಾರಿಹೋದ ಜಾಗಕ್ಕೆ ಇಂದು ಹತ್ತುಪಟ್ಟು ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಜೀವನಕ್ಕಿಂತ, ಜೀವ ಮುಖ್ಯ ಎಂದು ಬೇಸಾಯ ಮಾಡಲು ಹೊರಟಿದ್ದಾರೆ. ಆದರೆ ಇನ್ನೂ ಕೆಲವರು ಅಂದರೆ ಬಿಸಿಲನ್ನು ಕಂಡರೆ ಭಯಪಡುವವರು, ಚರ್ಮ ಕಾಂತಿಗಾಗಿ ಹಗಲಿರುಳು ಶ್ರಮಿಸುವವರು ಮಣ್ಣಿನ ವಾಸನೆಯ ಭಯದಿಂದ ನಗರದಲ್ಲೇ ಇದ್ದುಕೊಂಡು “ಹಾಗಿದ್ದಿದ್ದರೆ ಚೆಂದ!!” ಎಂದು ಹಳ್ಳಿಯ ಲೈಫ್ನ ಬಗ್ಗೆ ಮೆಲುಕು ಹಾಕುತ್ತಾ ಕಾಲ ಕಳೆಯುತ್ತಿದ್ದಾರೆ. ಆಗತ್ಯಕ್ಕಿಂತ ಹೆಚ್ಚಿನ ತಂತ್ರಜ್ಞಾನದ ತ್ವರಿತ ಬೆಳವಣಿಗೆ ಎಷ್ಟೋ ಜನರ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿದೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ.

Advertisement

 

ಅನಂತ ಕುಣಿಗಲ್‌

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next