Advertisement
ಸಾಧಾರಣವಾಗಿ ಸಹಿಸಿಕೊಳ್ಳುವ ಗುಣವುಳ್ಳ ಮಹಿಳೆಯರು ಹಳ್ಳಿಯ ವಾತಾವರಣ ಅಸಹನೀಯವಾಗುತ್ತಿರುವುದರಿಂದ ಬೆಳಗ್ಗೆ ಬಸ್ ಏರಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದು ಪ್ರತಿಭಟನೆ ಆರಂಭಿಸುತ್ತಾರೆ. ಪೊಲೀಸರು, ಅಬಕಾರಿ ಅಧಿಕಾರಿಗಳು ಆಗಾಗ ಜಂಟಿಯಾಗಿ ದಾಳಿ ನಡೆಸುವುದು ನಿಂತು ಹೋಗಿದೆ. ಪೊಲೀಸ್ ಅಧಿಕಾರಿಗಳು ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಚುನಾವಣೆ, ಬಂದೋಬಸ್ತ್, ನೆರೆ ತಾಲೂಕಿನ ಕರ್ತವ್ಯ ಹೀಗೆ ಪೊಲೀಸರಿಗೆ ಪುರಸೊತ್ತು ಇಲ್ಲ. ಅಬಕಾರಿಯವರಿಗೆ ಇದೆಲ್ಲ ಬೇಕಾಗಿಲ್ಲ. ಆಗೊಮ್ಮೆ ಈಗೊಮ್ಮೆ ನಾಲ್ಕಾರು ಬಾಟಲಿ ಗೋವಾ ಮದ್ಯ ಹಿಡಿದು ವರದಿ ಮಾಡಿ ಪತ್ರಿಕೆಯಲ್ಲಿ ಬರೆಸಿಕೊಂಡರೆ ಅವರ ಕೆಲಸ ಮುಗಿಯಿತು. ಆದ್ದರಿಂದ ಈಗ ಗೂಡಂಗಡಿಗಳಲ್ಲೂ, ಗಿಡಗಂಟಿಗಳ ಪೊದೆಗಳಲ್ಲಿ ಮದ್ಯ ಸಿಗುತ್ತಿದೆ. ಮಟ್ಕಾ ಚೀಟಿಯುಗದಲ್ಲಿ ಒಂದಿಷ್ಟು ಚೀಟಿ, ನಗದು ಹಿಡಿದು ಪೊಲೀಸರು ಪ್ರಕರಣ ದಾಖಲಿಸುತ್ತಿದ್ದರು. ಈಗ ಮೊಬೈಲ್ ಯುಗದಲ್ಲಿ ಬುಕ್ಕಿಂಗ್, ಪೇಮೆಂಟ್ ಎಲ್ಲವೂ ಮೊಬೈಲ್‌ನಿಂದ ನಡೆಯುತ್ತದೆ. ಪೊಲೀಸರಿಗೆ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತಿಲ್ಲ. ಚೌತಿ ಹಬ್ಬ ಹತ್ತಿರ ಬಂದಂತೆ ಜುಗಾರಿ ಮಂಡಗಳು ಹಳೆ ಕಟ್ಟಡಗಳಲ್ಲಿ ಜೋರಾಗುತ್ತವೆ. ಊರ ಪ್ರಮುಖರ ಆಶ್ರಯ ಇರುವುದರಿಂದ ಪೊಲೀಸರಿಗೆ ಸುದ್ದಿ ಹೋಗುವುದಿಲ್ಲ.
ತಾಲೂಕಿನಲ್ಲಿ ವರ್ಷಕ್ಕೆ ಅಧಿಕೃತವಾಗಿ 25 ಕೋಟಿ ರೂ. ಗಳು ಸರ್ಕಾರಿ ಮಾನ್ಯತೆ ಪಡೆದ ಮದ್ಯ ಮಾರಾಟವಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಕಳ್ಳಬಟ್ಟಿ, ಗೋವಾ ಮದ್ಯ ಸೇರಿ ಮಾರಾಟವಾಗುತ್ತದೆ. ಅಧಿಕೃತವಾಗಿ ತಾಲೂಕಿನಲ್ಲಿ ಕೇವಲ 10 ಅಧಿಕೃತ ಅಂಗಡಿಗಳಿವೆ. ಇಲ್ಲಿ ದಿನಕ್ಕೆ ಸರಾಸರಿ 160 ಪೆಟ್ಟಿಗೆ ಮದ್ಯದಂತೆ ವರ್ಷಕ್ಕೆ 58,400 ಪೆಟ್ಟಿಗೆ ಮದ್ಯ ಮತ್ತು ದಿನಕ್ಕೆ 90ರಂತೆ 32,850 ಬಿಯರ್ ಬಾಟಲಿಗಳು ಅಧಿಕೃತವಾಗಿ ಮಾರಾಟವಾಗುತ್ತವೆ. ಸೆಚೆಟ್ಸ್ ಮತ್ತು ಗೋವಾ, ಕಳ್ಳಬಟ್ಟಿ ಸೇರಿದರೆ ಲೆಕ್ಕ ಇಟ್ಟವರಿಲ್ಲ.
Related Articles
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ ಮದ್ಯಪಾನ ನಿವಾರಣ ಶಿಬಿರಗಳನ್ನು ಸತತ ನಡೆಸುತ್ತಿದ್ದರೂ ಶಿಬಿರಕ್ಕೆ ಹೋದವರಲ್ಲಿ ಹೆಚ್ಚಿನವರು ಕುಡಿತ ಬಿಟ್ಟರು, ಕೆಲವರು ಪುನಃ ಆರಂಭಿಸಿದರು. ಸರ್ಕಾರದ ಶಿಸ್ತುಕ್ರಮದ ಜೊತೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪರಿಸ್ಥಿತಿ ಗಂಭೀರವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಮದ್ಯ, ಗುಟ್ಕಾ, ಮಟ್ಕಾಗಳನ್ನು ನಿಯಂತ್ರಿಸದಿದ್ದರೆ ಹಳ್ಳಿಗಳು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ.
Advertisement
ಜೀಯು ಹೊನ್ನಾವರ